ಸುದ್ದಿಗಳು

ʼಧರ್ಮಾತೀತವಾಗಿ ಇಷ್ಟದ ವ್ಯಕ್ತಿಯ ಜೊತೆ ಬದುಕುವುದು ಜೀವಿಸುವ ಹಕ್ಕಿನೊಳಗೇ ಅಂತರ್ಗತವಾಗಿದೆʼ: ಅಲಾಹಾಬಾದ್ ಹೈಕೋರ್ಟ್

“…ತಮ್ಮ ಇಚ್ಛೆಯಂತೆ ಇಬ್ಬರು ವಯಸ್ಕರು ಒಟ್ಟಾಗಿ ಜೀವನ ನಡೆಸುವುದಕ್ಕೆ ಯಾವುದೇ ವ್ಯಕ್ತಿ, ಕುಟುಂಬಸ್ಥರು ಅಥವಾ ಆಡಳಿತಾರೂಢ ಸರ್ಕಾರ ಅವರ ಸಂಬಂಧಕ್ಕೆ ತರಕಾರರು ತೆಗೆಯಲಾಗದು” ಎಂದು ನ್ಯಾಯಾಲಯ ಹೇಳಿದೆ.

Bar & Bench

ವಿವಾಹಕ್ಕಾಗಿ ಧಾರ್ಮಿಕ ಮತಾಂತರ ನಿಷೇಧಿಸಲಾಗಿದೆ ಮತ್ತು ಅಂಥ ಮದುವೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂಬ ತನ್ನ ಹಿಂದಿನ ಆದೇಶ ಸರಿಯಲ್ಲ ಮತ್ತು ಉತ್ತಮ ಕಾನೂನು ರೂಪಿಸುವ ಕ್ರಮವಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ.

ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರಿದರೂ ಅವರಿಷ್ಟದ ಆಯ್ಕೆಯ ವ್ಯಕ್ತಿಯ ಜೊತೆ ಬದುಕುವುದು ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಅಂತರ್ಗತವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಒಂದು ವೇಳೆ ಇದರ ಹಿಂದೆ ಮತಾಂತರದ ಪ್ರಭಾವವಿದೆ ಎಂದು ಗೊತ್ತಾದರೆ ಸಾಂವಿಧಾನಿಕ ನ್ಯಾಯಾಲಯವು ಬಾಲಕಿಯರ ಆಸೆ ಮತ್ತು ಬಯಕೆಗಳನ್ನು ಅವರಿಗೆ ಹದಿನೆಂಟು ವರ್ಷ ತುಂಬಿರುವುದರಿಂದ ಸಹಜವಾಗಿಯೇ ತಿಳಿದುಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ವಿವೇಕ್‌ ಅಗರ್ವಾಲ್‌ ಮತ್ತು ಪಂಕಜ್‌ ನಖ್ವಿ ಅವರನ್ನೊಳಗೊಂಡ ಪೀಠ ಹೇಳಿದೆ.

ಹಿಂದಿನ ಎರಡು ತೀರ್ಪುಗಳನ್ನು 'ಉತ್ತಮ ಕಾನೂನು ರೂಪಿಸುವ ಕ್ರಮವಲ್ಲ' ಎಂದು ಉಲ್ಲೇಖಿಸಿರುವ ನ್ಯಾಯಾಲಯವು ಹೀಗೆ ಹೇಳಿದೆ.

“ಈ ತೀರ್ಪುಗಳಲ್ಲಿ ಯಾವುದೂ ಇಬ್ಬರು ವಯಸ್ಕರಿಗೆ ಸಂಬಂಧಿಸಿದಂತೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಪರಿಗಣಿಸಿಲ್ಲ ಹಾಗೂ ತಾವು ಯಾರೊಂದಿಗೆ ಬದುಕ ಬಯಸುತ್ತೇವೆ ಎನ್ನುವ ಆಯ್ಕೆಯ ಸ್ವಾತಂತ್ರ್ಯವನ್ನು ಪರಿಗಣಿಸಿಲ್ಲ. ನೂರ್‌ ಜಹಾನ್‌ ಮತ್ತು ಪ್ರಿಯಾಂಶಿ ಪ್ರಕರಣದಲ್ಲಿನ ತೀರ್ಪು ಉತ್ತಮ ಕಾನೂನು ರೂಪಿಸುವ ಕ್ರಮವಲ್ಲ.”
ಅಲಾಹಾಬಾದ್‌ ಹೈಕೋರ್ಟ್‌

“ಸಂವಿಧಾನದ 21ನೇ ವಿಧಿಯ ಅನ್ವಯ ಖಾತರಿಗೊಳಿಸಿರುವ ವ್ಯಕ್ತಿಯ ಬದುಕು ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ವಿಶೇಷ ಜವಾಬ್ದಾರಿ ನ್ಯಾಯಾಲಯಗಳು ಮತ್ತು ಸಾಂವಿಧಾನಿಕ ನ್ಯಾಯಾಲಯಗಳಿಗಿದೆ. ಯಾವುದೇ ಧರ್ಮ ಅನುಸರಣೆ ಮಾಡಿದರೂ ಅತ/ಆಕೆಯು ತಮ್ಮಿಷ್ಟದವರ ಜೊತೆ ಬದುಕುವುದು ವ್ಯಕ್ತಿಯ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿಯೇ ಅಂತರ್ಗತವಾಗಿದೆ. ಇದರಲ್ಲಿ ಮಧ್ಯಪ್ರವೇಶಿಸುವುದು ಇಬ್ಬರು ವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯದ ಹಕ್ಕಿನ ಗಂಭೀರ ಉಲ್ಲಂಘನೆಯಾಗಲಿದೆ. ಇಬ್ಬರು ವ್ಯಕ್ತಿಗಳೂ ಒಂದೇ ಲಿಂಗದವರಾಗಿದ್ದರೂ ಶಾಂತಿಯುತವಾಗಿ ಬದುಕಲು ಕಾನೂನು ಅವಕಾಶ ಮಾಡಿಕೊಡುವಾಗ ಯಾವುದೇ ವ್ಯಕ್ತಿ ಅಥವಾ ಕುಟುಂಬಸ್ಥರು ಅಥವಾ ಆಡಳಿತಾರೂಢರು ಸ್ವಇಚ್ಛೆಯಿಂದ ಒಟ್ಟಾಗಿರುವ ಇಬ್ಬರು ವಯಸ್ಕರ ಸಂಬಂಧದ ಬಗ್ಗೆ ತಕರಾರು ತೆಗೆಯುವುದು ಏಕೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ನಿರ್ದಿಷ್ಟ ವಯಸ್ಸು ದಾಟಿದ ಅತ/ಆಕೆ ತನ್ನ ನಿರ್ಧಾರದಂತೆ ಇನ್ನೊಬ್ಬ ವ್ಯಕ್ತಿಯ ಜೊತೆ ಬದುಕುವುದು ಕಡ್ಡಾಯವಾಗಿ ವ್ಯಕ್ತಿಯ ಸ್ವಾತಂತ್ರ್ಯವಾಗಿದೆ. ಈ ಹಕ್ಕನ್ನು ಕಸಿಯುವುದು ಆಕೆ/ಅತನ ಮೂಲಭೂತ ಹಕ್ಕುಗಳಲ್ಲಿ ಒಂದಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಲಿದೆ. ಇದರಲ್ಲಿ ಆಯ್ಕೆಯ ಸ್ವಾತಂತ್ರ್ಯದ ಹಕ್ಕು ಸೇರಿದ್ದು, ಇದರ ಅನ್ವಯ ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಘನತೆಯುತವಾಗಿ ಬದುಕುವ ಹಕ್ಕು ಸಂವಿಧಾನದ 21ನೇ ವಿಧಿಯಲ್ಲಿ ಸೇರಿದೆ” ಎಂದು ಪೀಠವು ಹೇಳಿದೆ.

ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ. ತಮ್ಮ ಇಚ್ಛೆಯಂತೆ ದಂಪತಿ ಮುಸ್ಲಿಂ ವಿವಾಹವಾಗಿದ್ದು, ಕಳೆದ ಒಂದು ವರ್ಷದಿಂದ ಸಂತೋಷದಿಂದ ಬಾಳ್ವಿಕೆ ನಡೆಸುತ್ತಿರುವುದಾಗಿ ಹೇಳಿರುವ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 363, 366, 352 ಮತ್ತು 506ರ ಅಡಿ (ಅಪಹರಣ‌, ಬಲವಂತವಾಗಿ ವಿವಾಹವಾಗಲು ಮಹಿಳೆಯನ್ನು ಅಪಹರಿಸುವುದು ಇತ್ಯಾದಿ) ಮತ್ತು ಪೊಕ್ಸೊ ಕಾಯಿದೆಯ ಸೆಕ್ಷನ್‌ 7 ಮತ್ತು 8ರ ಅಡಿ ಯುವತಿಯ ತಂದೆ ದೂರು ದಾಖಲಿಸಿದ್ದರು. ಎಫ್‌ಐಆರ್‌ ರದ್ದುಗೊಳಿಸುವ ಮೂಲಕ ಅರ್ಜಿದಾರರನ್ನು ಬಂಧನದಿಂದ ಪಾರು ಮಾಡುವಂತೆ ನ್ಯಾಯಾಲಯವನ್ನು ಕೋರಲಾಗಿತ್ತು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ಪೀಠವು, ಯಾವುದೇ ಅಪರಾಧ ಗೋಚರಿಸುತ್ತಿಲ್ಲ ಎಂದು ಹೇಳಿದೆ.

ಹೆಚ್ಚುವರಿ ಸರ್ಕಾರಿ ವಕೀಲ ದೀಪಕ್‌ ಮಿಶ್ರಾ ಮತ್ತು ವಕೀಲ ರಿತೇಶ್‌ ಕುಮಾರ್‌ ಸಿಂಗ್‌ ದೂರುದಾರ ತಂದೆಯ ಪರ ವಾದಿಸಿದರು. ಅರ್ಜಿದಾರರು ವಯಸ್ಕರೇ ಎಂಬುದನ್ನು ಅವರ ಪ್ರೌಢಶಾಲಾ ದಾಖಲಾತಿಗಳ ಮೂಲಕ ನ್ಯಾಯಾಲಯ ದೃಢಪಡಿಸಿಕೊಂಡಿತು.

“ಪ್ರಿಯಾಂಕಾ ಖಾರ್ವಾರ್ ಮತ್ತು ಸಲಾಮತ್ ಅವರನ್ನು ಹಿಂದೂ ಮತ್ತು ಮುಸ್ಲಿಂ ಎಂದು ನಾವು ಕಾಣುವುದಿಲ್ಲ, ಬದಲಿಗೆ ಇಬ್ಬರು ವಯಸ್ಕ ವ್ಯಕ್ತಿಗಳು ಸ್ವಇಚ್ಛೆ ಮತ್ತು ಆಯ್ಕೆಯಿಂದ ಒಂದು ವರ್ಷದಿಂದ ಶಾಂತಿಯುತವಾಗಿ ಮತ್ತು ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಪರಿಗಣಿಸುತ್ತೇವೆ."
ಅಲಾಹಾಬಾದ್‌ ಹೈಕೋರ್ಟ್‌

ಮರ್ಯಾದಗೇಡು ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಗಳನ್ನು ಉಲ್ಲೇಖಿಸಿರುವ ನ್ಯಾಯಪೀಠವು ಸದರಿ ಪ್ರಕರಣಕ್ಕೆ ಅಲ್ಲಿ ಪ್ರಸ್ತಾಪಿಸಲಾದ ತತ್ವಗಳು ಅನ್ವಯಿಸುತ್ತವೆ. ಇಬ್ಬರು ವಯಸ್ಕರ ಸಂಬಂಧವನ್ನು ಪೋಷಕರು ತಮ್ಮ ಹಿತಾಸಕ್ತಿಗಾಗಿ ಅಪಾಯಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಒಮ್ಮೆ ಯುವತಿಯು ವಯಸ್ಕಳಾದ ಮೇಲೆ ಯಾರನ್ನು ಭೇಟಿ ಮಾಡಬೇಕು ಎಂಬುದು ಆಕೆಯ ಆಯ್ಕೆಯಾಗಿರುತ್ತದೆ ಎಂದಿರುವ ಪೀಠವು “ಆದಾಗ್ಯೂ ತನ್ನ ಕುಟುಂಬಕ್ಕೆ ತೋರಿಸಬೇಕಾದ ಔಪಚಾರಿಕತೆ ಮತ್ತು ಗೌರವವನ್ನು ಪುತ್ರಿಯಿಂದ ಪೀಠ ಬಯಸುತ್ತದೆ” ಎಂದು ಹೇಳಿದೆ.