ಋತುಚಕ್ರ ನೈರ್ಮಲ್ಯ ಹಾಗೂ ಋತುಚಕ್ರ ನೈರ್ಮಲ್ಯದ ಉತ್ಪನ್ನಗಳನ್ನು ಪಡೆಯುವುದು ಸಂವಿಧಾನದ 21ನೇ ವಿಧಿಯಡಿಯಲ್ಲಿ ಒದಗಿಸಲಾದ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಕಲಿಯುತ್ತಿರುವ ಹೆಣ್ಣುಮಕ್ಕಳಿಗೆ ಉಚಿತವಾಗಿ ಋತುಚಕ್ರ ಪ್ಯಾಡ್‌ಗಳನ್ನು ಒದಗಿಸಬೇಕು ಹಾಗೂ ಪ್ರತ್ಯೇಕ ಶೌಚಾಲಯ ಸೌಲಭ್ಯವನ್ನು ಕಲ್ಪಿಸಬೇಕು ಎಂದ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ
"ಸಂವಿಧಾನದ 21ನೇ ವಿಧಿಯ ಅಡಿ ಒದಗಿಸಲಾದ ಬದುಕುವ ಹಕ್ಕಿನಲ್ಲಿ ಋತುಚಕ್ರ ಆರೋಗ್ಯದ ಹಕ್ಕು ಸೇರಿದೆ. ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಋತುಚಕ್ರ ನೈರ್ಮಲ್ಯ ನಿರ್ವಹಣಾ ಸೌಲಭ್ಯಗಳು ದೊರೆಯುವಂತೆ ಮಾಡುವುದರಿಂದ ಹೆಣ್ಣು ಮಗು ಅತ್ಯುನ್ನತ ಮಟ್ಟದ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಾಧಿಸಲು ಸಹಾಯಕವಾಗುತ್ತದೆ. ಆರೋಗ್ಯಕರ ಸಂತಾನೋತ್ಪತ್ತಿ ಜೀವನದ ಹಕ್ಕು ಎಂಬುದು ಲೈಂಗಿಕ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಮಾಹಿತಿಯನ್ನು ಪಡೆಯುವ ಹಕ್ಕನ್ನು ಒಳಗೊಂಡಿದೆ. ಸಮಾನತೆಯ ಹಕ್ಕು ಎಂಬುದು ಸಮಾನ ರೀತಿಯಲ್ಲಿ ಪಾಲ್ಗೊಳ್ಳುವ ಹಕ್ಕಿನ ಮೂಲಕ ವ್ಯಕ್ತವಾಗುತ್ತದೆ. ಅದೇ ಸಮಯದಲ್ಲಿ, ಸಮಾನ ಅವಕಾಶಗಳು ಎನ್ನುವುದು ಉತ್ತಮ ಲಾಭಗಳನ್ನು ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಸಂಪಾದಿಸಲು ಇರುವ ನ್ಯಾಯಸಮ್ಮತ ಅವಕಾಶವಾಗಿರುತ್ತದೆ” ಎಂದು ತೀರ್ಪು ವಿವರಿಸಿದೆ.
ತೀರ್ಪಿನ ಪ್ರಮುಖಾಂಶಗಳು ಮತ್ತು ನಿರ್ದೇಶನಗಳು
ಋತುಚಕ್ರ ಆರೋಗ್ಯ ಹಾಗೂ ಋತುಚಕ್ರ ನೈರ್ಮಲ್ಯದ ಉತ್ಪನ್ನಗಳನ್ನು ಪಡೆಯುವುದು ಸಂವಿಧಾನದ 21ನೇ ವಿಧಿಯಡಿಯಲ್ಲಿ ಒದಗಿಸಲಾದ ಜೀವಿಸುವ ಹಕ್ಕಿನ ಭಾಗ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಶಾಲೆಗಳು ಅದು ಸರ್ಕಾರಿ ಅಥವಾ ಖಾಸಗಿಯೇ ಆಗಿರಲಿ, ಲಿಂಗ-ಪ್ರತ್ಯೇಕ ಶೌಚಾಲಯಗಳನ್ನು ಹೊಂದಿರಬೇಕು. ಅವುಗಳನ್ನು ಬಳಸುವ ವಿದ್ಯಾರ್ಥಿಗಳ ಗೌಪ್ಯತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳುವಂತೆ ವಿನ್ಯಾಸವನ್ನು ಹೊಂದಿರಬೇಕು. ಅಲ್ಲದೆ ಸೂಕ್ತ ನೀರಿನ ಸಂಪರ್ಕ ಹೊಂದಿರುವುದನ್ನು, ವೈಕಲ್ಯತೆ ಇರುವವರು ಸಹ ಬಳಸಲು ಯೋಗ್ಯವಿರುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು.
ಎಲ್ಲಾ ಶಾಲೆಗಳು ಜೈವಿಕ ವಿಘಟನೆ ಹೊಂದುವಂತಹ ನೈರ್ಮಲ್ಯ ನ್ಯಾಪ್ಕಿನ್‌ಗಳನ್ನು ಉಚಿತವಾಗಿ ಒದಗಿಸಬೇಕು. ಈ ಪ್ಯಾಡ್‌ಗಳು ವಿದ್ಯಾರ್ಥಿನಿಯರಿಗೆ ಸುಲಭವಾಗಿ ಲಭ್ಯವಿರಬೇಕು, ಮೇಲಾಗಿ ಶೌಚಾಲಯ ಆವರಣದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರಗಳ ಮೂಲಕ, ಅಥವಾ, ಅಂತಹ ಸ್ಥಾಪನೆಯು ತಕ್ಷಣವೇ ಸಾಧ್ಯವಾಗದಿದ್ದರೆ, ಗೊತ್ತುಪಡಿಸಿದ ಸ್ಥಳದಲ್ಲಿ ಅಥವಾ ಶಾಲೆಯೊಳಗೆ ಗೊತ್ತುಪಡಿಸಿದ ಅಧಿಕಾರಿಗಳ ಬಳಿ ಅವುಗಳು ಲಭ್ಯವಿರಬೇಕು.
ಪ್ರತಿ ಶಾಲೆಯಲ್ಲಿಯೂ ಮುಟ್ಟಿನ ನೈರ್ಮಲ್ಯ ನಿರ್ವಹಣಾ ಕೊಠಡಿಗಳನ್ನು (ಎಂಎಚ್‌ಎಂ) ಸ್ಥಾಪಿಸಬೇಕು, ಮುಟ್ಟಿನ ಸಂಬಂಧಿತ ತುರ್ತುಸ್ಥಿತಿಗಳನ್ನು ಪರಿಹರಿಸಲು ಹೆಚ್ಚುವರಿ ಒಳ ಉಡುಪು, ಹೆಚ್ಚುವರಿ ಸಮವಸ್ತ್ರ, ಬಿಸಾಡಬಹುದಾದ ಚೀಲಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಇವುಗಳು ಒಳಗೊಂಡಿರಬೇಕು.
ಇತ್ತೀಚಿನ ಘನತ್ಯಾಜ್ಯ ನಿರ್ವಹಣಾ ನಿಯಮಗಳಿಗೆ ಅನುಸಾರವಾಗಿ, ನೈರ್ಮಲ್ಯ ನ್ಯಾಪ್ಕಿನ್‌ಗಳ ವಿಲೇವಾರಿಗಾಗಿ ಪ್ರತಿ ಶಾಲೆಯು ಸುರಕ್ಷಿತ, ಆರೋಗ್ಯಕರ ಮತ್ತು ಪರಿಸರ ಪೂರಕವಾದ ಕಾರ್ಯವಿಧಾನಗಳನ್ನು ಹೊಂದಿರಬೇಕು.
ಮುಂದುವರೆದು, ನ್ಯಾಯಾಲಯವು ತೀರ್ಪಿನ ಆಶಯವನ್ನು ಈ ರೀತಿಯಾಗಿ ವಿವರಿಸಿದೆ:
ಋತುಚಕ್ರ ನೈರ್ಮಲ್ಯ ನಿರ್ವಹಣಾ ಸೌಲಭ್ಯಗಳನ್ನು ಪಡೆಯುವುದು ಜೀವಿಸುವ ಹಕ್ಕಿನ ಭಾಗವಾಗಿದೆ. ಶಾಲೆಗಳಲ್ಲಿ ಲಿಂಗ ಪ್ರತ್ಯೇಕ ಶೌಚಾಲಯಗಳ ಕೊರತೆ ಮತ್ತು ಮಾಸಿಕ ಸ್ವಚ್ಛತಾ ಸೌಲಭ್ಯಗಳ ಕೊರತೆ ಬಾಲಕಿಯರ ಹಕ್ಕುಗಳಿಗೆ ಧಕ್ಕೆ ತರುತ್ತದೆ. ಋತುಚಕ್ರ ಸ್ವಚ್ಛತೆ ನಿರ್ವಹಣೆಗೆ ಅಗತ್ಯವಾದ ಸೌಲಭ್ಯಗಳು ಲಭ್ಯವಿಲ್ಲದಿರುವುದು ಬಾಲಕಿಯರ ಘನತೆಗೂ ಧಕ್ಕೆ ಉಂಟು ಮಾಡುತ್ತದೆ. ಗೌಪ್ಯತೆಗೂ ಗೌರವಕ್ಕೂ ಅವಿನಾಭಾವ ನಂಟು ಇರುತ್ತದೆ. ಗೌಪ್ಯತೆಯ ಹಕ್ಕನ್ನು ಪ್ರಭುತ್ವ ಉಲ್ಲಂಘನೆ ಮಾಡದಿರುವುದಷ್ಟೇ ಅಲ್ಲ ಗೌಪ್ಯತೆ ರಕ್ಷಿಸಲು ಸಕಾರಾತ್ಮಕ ಕ್ರಮ ಕೈಗೊಳ್ಳುವ ಕರ್ತವ್ಯವೂ ಪ್ರಭುತ್ವಕ್ಕೆ ಸೇರಿದ್ದು. ಬಾಲಕಿಯರ ಲೈಂಗಿಕ ಹಾಗೂ ಪ್ರಜನನ ಆರೋಗ್ಯವನ್ನು ಸುಧಾರಿಸಲು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಋತುಚಕ್ರ ಸೌಲಭ್ಯ ಅಗತ್ಯ.
ಇಂದಿನ ತೀರ್ಪು ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ಪೋಷಕರು ಋತುಚಕ್ರ ಸ್ವಚ್ಛತಾ ಸೌಲಭ್ಯಗಳ ಹಕ್ಕನ್ನು ಗುರುತಿಸಿ ಒತ್ತಾಯಿಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. ಸಹಾಯ ಕೇಳಲು ಹಿಂಜರಿಯುವ ಬಾಲಕಿಯರು, ಸಂಪನ್ಮೂಲ ಕೊರತೆಯಿಂದ ಸಹಾಯ ಮಾಡಲಾಗದ ಶಿಕ್ಷಕರು ಮತ್ತು ಮೌನದ ಪರಿಣಾಮ ಅರಿಯದ ಪೋಷಕರಿಗಾಗಿ ಈ ತೀರ್ಪು ಮಹತ್ವದ್ದಾಗಿದೆ.
ಋತುಸ್ರಾವದ ಕಾರಣಕ್ಕೆ ಶಾಲೆಗೆ ತೆರಳಲು ಸಾಧ್ಯವಾಗದೆ ಉಳಿದ ಬಾಲಕಿಯರಿಗೆ ತಪ್ಪು ಅವರದ್ದಲ್ಲ ಎಂಬ ಸಂದೇಶ ತೀರ್ಪಿನಿಂದ ದೊರೆಯಲಿದೆ. ಅತಿ ದುರ್ಬಲರನ್ನು ನಾವು ಹೇಗೆ ರಕ್ಷಿಸುತ್ತೇವೆ ಎಂಬುದರ ಆಧಾರದಲ್ಲಿ ಸಮಾಜದ ಪ್ರಗತಿಯನ್ನು ಅಳೆಯಲಾಗುತ್ತದೆ ಎಂದು ತೀರ್ಪಿನಲ್ಲಿ ನ್ಯಾಯಾಲಯವು ವಿವರಿಸಿದೆ.