Justice S Ravindra Bhat and Supreme Court
Justice S Ravindra Bhat and Supreme Court 
ಸುದ್ದಿಗಳು

ವಿಕಲಚೇತನರಿಗೆ ಸುಪ್ರೀಂ ಕೋರ್ಟ್ ಅಂಗಳ ಪ್ರವೇಶ ಸುಗಮಗೊಳಿಸಲು ಪರಿಶೀಲನೆಗೆ ನ್ಯಾ. ಭಟ್ ನೇತೃತ್ವದ ಸಮಿತಿ ರಚಿಸಿದ ಸಿಜೆಐ

Bar & Bench

ಕೆಲ ದಿನಗಳ ಹಿಂದೆ ವಿಕಲಚೇತನ ಅರ್ಜಿದಾರರೊಬ್ಬರನ್ನು ಭೇಟಿಯಾಗಲು ನ್ಯಾಯಾಲಯದ ಆಚೆಗೆ ತಾವೇ ಖುದ್ದು ಸಾಗಿ ಬಂದಿದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಇದೀಗ ಸರ್ವೋಚ್ಚ ನ್ಯಾಯಾಲಯ ಆವರಣ ಪ್ರವೇಶಿಸುವ ವಿಕಲಚೇತನರು ಎದುರಿಸುವ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದ್ದಾರೆ.

"ಸುಪ್ರೀಂ ಕೋರ್ಟ್ ಪ್ರವೇಶಸಾಧ್ಯತೆ  ಸಮಿತಿ" ಹೆಸರಿನ ಸಮಿತಿಯ ನೇತೃತ್ವವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರಿಗೆ ವಹಿಸಲಾಗಿದ್ದು ಸುಪ್ರೀಂ ಕೋರ್ಟ್ ಆವರಣದ ಸಮಗ್ರ ಪ್ರವೇಶಾತಿಗೆ ವಿಕಲಚೇತನರಿಗೆ ಇರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುವ ಕಾರ್ಯವನ್ನು ಅವರು ನೋಡಿಕೊಳ್ಳಲಿದ್ದಾರೆ.

ವಿಕಲಚೇತನರಿಗೆ ಅಗತ್ಯವಾದ ಭೌತಿಕ ಮತ್ತು ತಂತ್ರಜ್ಞಾನ ಲಭ್ಯತೆಯನ್ನು ಕೂಡ ಸಮಿತಿ ಪರಿಶೀಲಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಭಾನುವಾರ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯದ ಆವರಣಕ್ಕೆ ಭೇಟಿ ನೀಡುವ ವಿಕಲಚೇತನ ವ್ಯಕ್ತಿಗಳಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪ ಮತ್ತು ವ್ಯಾಪ್ತಿ ನಿರ್ಣಯಿಸಲು ಅನುವಾಗುವಂತೆ ಪ್ರಶ್ನಾವಳಿಯೊಂದನ್ನು  ಸಿದ್ಧಪಡಿಸಿ ಬಿಡುಗಡೆ ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ.

ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಪ್ರಾಧ್ಯಾಪಕರು, ಸುಪ್ರೀಂ ಕೋರ್ಟ್‌ನ ಭಿನ್ನ ಸಾಮರ್ಥ್ಯದ ಉದ್ಯೋಗಿಗಳು, ಸುಪ್ರೀಂ ಕೋರ್ಟ್‌ ವಕೀಲರ ಸಂಘದಿಂದ ನಾಮನಿರ್ದೇಶನಗೊಂಡ ಭಿನ್ನ ಸಾಮರ್ಥ್ಯದ ವಕೀಲರು, ಎನ್‌ಎಎಲ್‌ಎಸ್‌ಎಆರ್‌ ವಿಶ್ವವಿದ್ಯಾಲಯದ ಅಂಗವೈಕಲ್ಯ ಅಧ್ಯಯನ ಕೇಂದ್ರದಿಂದ ನಾಮನಿರ್ದೇಶನಗೊಂಡ ವ್ಯಕ್ತಿಗಳನ್ನು ಸಮಿತಿ ಒಳಗೊಂಡಿದ್ದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಅಧಿಕಾರಿಯೊಬ್ಬರು ಅದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

"ಸಮಿತಿಯು ಸರ್ವೋಚ್ಚ ನ್ಯಾಯಾಲಯದ ವಕೀಲರು, ದಾವೆದಾರರು, ಇಂಟರ್ನ್‌ಗಳು ಇತ್ಯಾದಿ ವ್ಯಕ್ತಿಗಳಿಂದ ಮಾಹಿತಿ ಪಡೆಯಬೇಕು. ಬೆಂಗಳೂರಿನ ಎನ್‌ಎಲ್‌ಯು ಪ್ರಾಧ್ಯಾಪಕರನ್ನು ಒಳಗೊಂಡಂತೆ ಸಮಿತಿಯು ಪರಿಶೀಲನೆ ಮತ್ತು ಸಮೀಕ್ಷೆಯ ಫಲಿತಾಂಶಗಳನ್ನು ಒಳಗೊಂಡಿರುವ ವರದಿಯನ್ನು ಸಿದ್ಧಪಡಿಸಿ ಅಡೆತಡೆಗಳನ್ನು ತೆಗೆದುಹಾಕುವಂತಹ ಅಂಶಗಳನ್ನು ಶಿಫಾರಸು ಮಾಡಬೇಕು" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.