Supreme Court 
ಸುದ್ದಿಗಳು

ವಿಕಲಚೇತನರ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಪರಿಗಣಿಸಬೇಕು: ಸುಪ್ರೀಂ ಕೋರ್ಟ್

"ಅಂಗವೈಕಲ್ಯ ಆಧಾರಿತ ತಾರತಮ್ಯದ ವಿರುದ್ಧದ ಹಕ್ಕನ್ನು ಮೂಲಭೂತ ಹಕ್ಕಿನಂತೆಯೇ ಪರಿಗಣಿಸಲು ಇದು ಸಕಾಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

ಅಂಗವೈಕಲ್ಯ ಆಧಾರಿತ ತಾರತಮ್ಯ ವಿರೋಧಿ ಹಕ್ಕುಗಳನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಇದು ಸಕಾಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪಿನಲ್ಲಿ ತಿಳಿಸಿದೆ [ನ್ಯಾಯಾಂಗ ಸೇವೆಗಳಲ್ಲಿ ದೃಷ್ಟಿಹೀನರ ನೇಮಕಾತಿ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ನಡುವಣ ಪ್ರಕರಣ].

ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ಭಾರತದಲ್ಲಿ ನ್ಯಾಯಾಂಗ ಸೇವೆಗಳಿಗೆ ನೇಮಕಾತಿಗೆ ಅರ್ಹರು ಎಂದು ಮಾರ್ಚ್‌ 3ರಂದು ನೀಡಿದ್ದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

ವಿಕಲಚೇತನ ವ್ಯಕ್ತಿಗಳು ನ್ಯಾಯಾಂಗ ಸೇವಾ ಅವಕಾಶಗಳನ್ನು ಪಡೆಯುವಲ್ಲಿ ಯಾವುದೇ ತಾರತಮ್ಯ ಎದುರಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಬದಲಿಗೆ, ಸಮಾನ ಪ್ರವೇಶಾವಕಾಶ ಒದಗಿಸುವ ಸಮಗ್ರ ಚೌಕಟ್ಟನ್ನು ರೂಪಿಸಲು ಸರ್ಕಾರ ದೃಢವಾದ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಆರ್‌ಪಿಡಬ್ಲ್ಯೂಡಿ ಕಾಯಿದೆ- 2016ರಲ್ಲಿ ಗುರುತಿಸಿರುವಂತೆ ಅಂಗವೈಕಲ್ಯ ಆಧಾರಿತ ತಾರತಮ್ಯ ವಿರೋಧಿ ಹಕ್ಕನ್ನು ಮೂಲಭೂತ ಹಕ್ಕಿನಂತೆಯೇ ಪರಿಗಣಿಸಲು ಇದು ಸಕಾಲ. ಇದರಿಂದ ಯಾವುದೇ ಅಭ್ಯರ್ಥಿಯನ್ನು ಅವರ ಅಂಗವೈಕಲ್ಯದ ಕಾರಣದಿಂದಾಗಿ ನಿರಾಕರಿಸುವಂತಿಲ್ಲ ಎಂಬುದು ಖಾತ್ರಿಯಾಗುತ್ತದೆ. ಅಲ್ಲದೆ ವ್ಯಾಪಕವಾಗಿ ಚರ್ಚಿಸಿರುವಂತೆ ಅಂತಾರಾಷ್ಟ್ರೀಯ ಒಡಂಬಡಿಕೆ, ಸ್ಥಾಪಿತ ನ್ಯಾಯಶಾಸ್ತ್ರ ಹಾಗೂ ಆರ್‌ಪಿಡಬ್ಲ್ಯೂಡಿ ಕಾಯಿದೆಯಲ್ಲಿ ಪ್ರತಿಪಾದಿಸಲಾದ ಸಮಂಜಸ ಒಳಗೊಳ್ಳುವಿಕೆ ತತ್ವದಡಿ ವಿಕಲಚೇತನರ ಅರ್ಹತೆ ನಿರ್ಣಯಿಸಲು ಪೂರ್ವಾಪೇಕ್ಷಿತವಾಗಿ ಅವರಿಗೆ ಅವಕಾಶ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ರಾಜ್ಯ ನ್ಯಾಯಾಂಗ ಸೇವೆಗಳಲ್ಲಿ ನೇಮಕಾತಿ ಪಡೆಯುವುದನ್ನು ತಡೆ ಹಿಡಿದಿದ್ದ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿ ವಿರುದ್ಧ ದೃಷ್ಟಿದೋಷವುಳ್ಳ ಅಭ್ಯರ್ಥಿಯ ತಾಯಿಯೊಬ್ಬರು ಕಳೆದ ವರ್ಷ (2024) ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು. ಪತ್ರವನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿತ್ತು. ಜೊತೆಗೆ ರಾಜಸ್ಥಾನ, ಮಧ್ಯಪ್ರದೇಶದಿಂದ ಬಂದಿದ್ದ ಇದೇ ರೀತಿಯ ಅರ್ಜಿಗಳನ್ನೂ ಅದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು.  

ಸಮಂಜಸ ಅವಕಾಶ ತತ್ವ ಎಂಬುದು ವಿವೇಚನೆಯಿಂದ ತೆಗೆದುಕೊಳ್ಳುವ ಕ್ರಮವಾಗಿರದೆ ವಿಕಲಚೇತನ ವ್ಯಕ್ತಿಗಳಿಗೆ ಗಣನೀಯ ಸಮಾನತೆ ಒದಗಿಸಲು ಬೇಕಾದ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತತ್ವವು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾದ ಘನತೆಯ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅದು ಹೇಳಿದೆ.

ಸಮಂಜಸವಾದ ಅವಕಾಶ ತತ್ವವು ವಿಕಲಚೇತನರಿಗೆ ಸಮಾನ ಅವಕಾಶವನ್ನು ಖಚಿತಪಡಿಸುವುದಲ್ಲದೆ, ಅಗತ್ಯ ಅವಕಾಶ ಮತ್ತು ಅನುಕೂಲಕರ ವಾತಾವರಣ ಒದಗಿಸಿದ ನಂತರ ಅವರ  ಅರ್ಹತೆಯನ್ನು ಮೌಲ್ಯಮಾಪನ ಮಾಡಬೇಕು ಎಂದು ದೃಢೀಕರಿಸುವ ಮೂಲಕ ಅವರ ಘನತೆಯನ್ನು ಎತ್ತಿಹಿಡಿಯುತ್ತದೆ ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಂಗದಲ್ಲಿ ಯಶಸ್ಸಿಗೆ ಅಂಗವೈಕಲ್ಯ ಎಂಬುದು ಅಡ್ಡಿಯಲ್ಲ ಎಂದು ತಿಳಿಸುವುದಕ್ಕಾಗಿ ನ್ಯಾಯಾಲಯ ದಕ್ಷಿಣ ಆಫ್ರಿಕಾದಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಝಾಕ್ ಮೊಹಮ್ಮದ್ ಯಾಕೂಬ್, ಅಮೆರಿಕದಲ್ಲಿ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ್ದ ಡೇವಿಡ್ ಎಸ್ ಟ್ಯಾಟೆಲ್, ಕೆನಡಾದ ಅಂಧ ವಕೀಲರಾದ ಡೇವಿಡ್ ಲೆಪೋಫ್ಸ್ಕಿ ಅವರಂತಹ ಕಾನೂನು ವೃತ್ತಿಪರರ ಯಶೋಗಾಥೆಯನ್ನು ಸ್ಮರಿಸಿತು.

ಅಂಗವೈಕಲ್ಯ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತದ ಹಿರಿಯ ವಕೀಲ ಎಸ್‌ಕೆ ರುಂಗ್ಟಾ ಮತ್ತು ಅಂಗವೈಕಲ್ಯ ಕಾಯಿದೆಗೆ ಕೊಡುಗೆ ನೀಡಿದ ಇಸ್ರೇಲ್ ಸಂಸತ್ತಿನಲ್ಲಿ ದೃಷ್ಟಿದೋಷ ಹೊಂದಿರುವ ಕಾನೂನು ಸಲಹೆಗಾರ ಟೋಮರ್ ರೋಸ್ನರ್ ಸೇರಿದಂತೆ ಹಲವರನ್ನು ನ್ಯಾಯಾಲಯ ಉಲ್ಲೇಖಿಸಿತು.

ಅಂತೆಯೇ ಗಂಭೀರ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳು ಮತ್ತು ಕಡಿಮೆ ಗೋಚರತೆ ಹೊಂದಿರುವವರು ನ್ಯಾಯಾಂಗಕ್ಕೆ ಸೇರಲು ಅವಕಾಶ ನೀಡದ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ ನಿಯಮ 6A ಅನ್ನು ಅದು ರದ್ದುಗೊಳಿಸಿತು.

ಇದೇ ವೇಳೆ ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗೆ ಸೇರಲು ಮೂರು ವರ್ಷ ವಕೀಲಿಕೆ ಮಾಡಿರಬೇಕು ಅಥವಾ ಕನಿಷ್ಠ ಶೇಕಡಾ 70 ರಷ್ಟು ಒಟ್ಟು ಅಂಕಗಳನ್ನು ಪಡೆದಿರಬೇಕು ಎಂಬ ನಿಯಮ 7ಅನ್ನು ಕೂಡ ಅಮಾನ್ಯಗೊಳಿಸಿತು.