ತನ್ನ ಪತ್ನಿಯ ಅಣತಿಯಂತೆ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿ ಶತಕೋಟಿ ಡಾಲರ್ ಮೌಲ್ಯದ ಸ್ಟಾರ್ಟ್‌ಅಪ್ ಉದ್ಯಮ ರಿಪ್ಲಿಂಗ್‌ನ ಸಹ ಸಂಸ್ಥಾಪಕ ಪ್ರಸನ್ನ ಶಂಕರನಾರಾಯಣನ್ ಅವರು ಮದ್ರಾಸ್ ಹೈಕೋರ್ಟ್ ಕದ ತಟ್ಟಿದ್ದಾರೆ.
ವೈವಾಹಿಕ ವ್ಯಾಜ್ಯ ನಡೆಯುತ್ತಿರುವಾಗಲೇ, ತಮ್ಮ ಮಗನನ್ನು ಅಪಹರಿಸಿ ದೇಶದಿಂದ ಹೊರಗೆ ಕರೆದೊಯ್ಯುವ ಯತ್ನ ನಡೆಸಲಾಗುತ್ತಿದೆ ಎಂದು ಪ್ರಸನ್ನ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈಚೆಗೆ ಅಳಲು ತೋಡಿಕೊಂಡಿದ್ದರು.
ತನ್ನ ಪರಿತ್ಯಕ್ತ ಪತ್ನಿ ಸುಳ್ಳು ಅಪಹರಣ ದೂರು ದಾಖಲಿಸಿರುವುದರಿಂದ ತಮಿಳುನಾಡು ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಮಗನನ್ನು ತನ್ನಿಂದ ದೂರವಿಡಲು ಯತ್ನಿಸುತ್ತಿದ್ದಾರೆ ಎಂದು ಶಂಕರನಾರಾಯಣನ್ ಆರೋಪಿಸಿದ್ದಾರೆ.
ಪ್ರಸನ್ನ ಅವರಿಗೆ ಕಿರುಕುಳ ನೀಡದಂತೆ ನ್ಯಾಯಮೂರ್ತಿ ಜಿ ಕೆ ಇಳಂತಿರೈಯನ್ ಇಂದು ಪೊಲೀಸರಿಗೆ ನಿರ್ದೇಶನ ನೀಡಿದರು.
ಹಿರಿಯ ವಕೀಲರಾದ ಎ ರಮೇಶ್ ಮತ್ತು ಗೀತಾ ಲೂತ್ರಾ ಮತ್ತು ವಕೀಲರಾದ ಆದರ್ಶ್ ಕೊಠಾರಿ, ಅಶ್ವಿನಿ ರಮೇಶ್, ದೀಪಿಕಾ ಮುರಳಿ, ಅನಿಲ ರಾಜೇಂದ್ರನ್, ಕಾರ್ತಿಕ್ ಸುಂದರಂ, ನಿವಿಯಾ ಎಸ್‌ಆರ್, ಹರಿನಾರಾಯಣನ್ ಕೆ ಮತ್ತು ರಾಜಾ ಎಂ ಶಂಕರನಾರಾಯಣನ್ ಅವರನ್ನು ಪ್ರತಿನಿಧಿಸಿದ್ದರು.
ಮಾರ್ಚ್ 7 ರಂದು ಪೊಲೀಸರು ಮಗುವನ್ನು ಕರೆದೊಯ್ಯಲು ಯತ್ನಿಸಿದ್ದರು. ಆದರೆ ತಾನು ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದರಿಂದ ಪೊಲೀಸರ ಯತ್ನ ವಿಫಲವಾಗಿತ್ತು. ತನ್ನ ಮಗ ತನ್ನೊಂದಿಗೆ ಸಂತೋಷದಿಂದ ಇದ್ದಾನೆ ಎಂದು ಪ್ರಸನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಪೊಲೀಸರು ತನ್ನ ತಾಯಿಯನ್ನು ಭೇಟಿಯಾಗಿ ತಾನು ಎಲ್ಲಿದ್ದೇನೆ ಎಂಬುದನ್ನು ವಿಚಾರಿಸಿದ್ದಾರೆ. ಜೊತೆಗೆ ಬೆಂಗಳೂರಿನ ಸ್ನೇಹಿತ ಎಸ್ ಗೋಕುಲ್ ಅವರನ್ನು ಬಂಧಿಸಿದ್ದಾರೆ ಎಂದು ಶಂಕರನಾರಾಯಣನ್ ಆರೋಪಿಸಿದ್ದಾರೆ.
ಈ ಹಿಂದೆ ಅಮೆರಿಕ ಮತ್ತು ಸಿಂಗಾಪುರದಲ್ಲಿ ಕೂಡ ತನ್ನ ಪರಿತ್ಯಕ್ತ ಪತ್ನಿ ಇದೇ ರೀತಿಯ ಹಲವು ಆಧಾರರಹಿತ ಕ್ರಿಮಿನಲ್ ದೂರುಗಳನ್ನು ದಾಖಲಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.