ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಏಪ್ರಿಲ್ 6ರಿಂದ ಮೇ ಅಂತ್ಯದವರಗೆ ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠಗಳ ಕಾರ್ಯ ಕಲಾಪದ ಸಮಯ ಬದಲಾವಣೆ ಮಾಡಲಾಗಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಅವರು ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.
ಕಲಬುರ್ಗಿ ಹೈಕೋರ್ಟ್ ಪೀಠದ ಕಲಾಪವು ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ನಿತ್ಯ ಬೆಳಿಗ್ಗೆ 8ರಿಂದ 11 ಗಂಟೆ, ನಂತರ ಬೆಳಿಗ್ಗೆ 11.3ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಬೆಳಿಗ್ಗೆ 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಶನಿವಾರ ಹೊರತುಪಡಿಸಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರಿಗೆ ಇರಲಿದೆ. ಶನಿವಾರ ಬೆಳಿಗ್ಗೆ 7.30ರಿಂದ 11 ಗಂಟೆಯವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಕಲಬುರ್ಗಿ ವಿಭಾಗದಡಿ ಬರುವ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಯಾದಗಿರಿ ಮತ್ತು ಬೆಳಗಾವಿ ವಿಭಾಗದಕ್ಕೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್ ಮತ್ತು ಕ್ರಿಮಿನಲ್, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯ ಕಾರ್ಯ ಕಲಾಪದ ಸಮಯವನ್ನೂ ಸಹ ಏಪ್ರಿಲ್ 4ರಿಂದ ಮೇ ಅಂತ್ಯದವರೆಗೆ ಬದಲಿಸಲಾಗಿದೆ.
ಈ ನ್ಯಾಯಾಲಯಗಳ ಕಲಾಪವು ಏಪ್ರಿಲ್ 4ರಿಂದ ಬೆಳಿಗ್ಗೆ 8ರಿಂದ 11 ಮತ್ತು 11.30ರಿಂದ ಮಧ್ಯಾಹ್ನ 1.30ರವರೆಗೆ ಕೋರ್ಟ್ ಕಲಾಪ ನಡೆಯಲಿದೆ. ಮಧ್ಯಾಹ್ನ 11ರಿಂದ 1.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಬೆಳಿಗ್ಗೆ 7.30ಕ್ಕೆ ಆರಂಭವಾಗಿ ಮಧ್ಯಾಹ್ನ 2ಕ್ಕೆ ಕೊನೆಯಾಗಲಿದೆ. ಏಪ್ರಿಲ್ 24ರಂದು ನಾಲ್ಕನೇ ಶನಿವಾರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.