BBMP and Karnataka HC
BBMP and Karnataka HC 
ಸುದ್ದಿಗಳು

ರಸ್ತೆ ಗುಂಡಿ ಪ್ರಕರಣ: ಕಾಮಗಾರಿಯ ಗುಣಮಟ್ಟದ ವರದಿ ಸಲ್ಲಿಕೆಗೆ ಎನ್‌ಎಚ್‌ಎಐಗೆ 8 ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

Bar & Bench

ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಮುಚ್ಚಿರುವ ಕಾಮಗಾರಿಗೆ ಸಂಬಂಧಿಸಿದಂತೆ ವಿವಿಧೆಡೆ ಪಡೆಯಲಾಗಿರುವ ಮಾದರಿಯ ತಪಾಸಣಾ ವರದಿಯನ್ನು ಎಂಟು ವಾರಗಳಲ್ಲಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ರಸ್ತೆ ಗುಂಡಿಗಳ ಭರ್ತಿಗೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಮುಚ್ಚಿರುವ ಕಾಮಗಾರಿಗೆ ಸಂಬಂಧಿಸಿದಂತೆ ವಿವಿಧೆಡೆ ಪಡೆಯಲಾಗಿರುವ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫಲಿತಾಂಶ ನಿರೀಕ್ಷಿಸಲಾಗುತ್ತಿದ್ದು, ಇದರ ಕುರಿತಾ ವರದಿ ಸಲ್ಲಿಸಲು ಹತ್ತು ವಾರಗಳ ಕಾಲಾವಕಾಶ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನ್ಯಾಯಾಲಯವನ್ನು ಕೋರಿತು.

ಎನ್‌ಎಚ್‌ಎಐ ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಬೆಂಗಳೂರಿನ ವಿವಿಧೆಡೆ ಮುಚ್ಚಲಾಗಿರುವ ರಸ್ತೆ ಗುಂಡಿ ಕುರಿತು ಪಡೆದಿರುವ ಮಾದರಿಯನ್ನು ತಪಾಸಣೆಗಾಗಿ ಉಪವಿಭಾಗೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಇನ್ನಷ್ಟೇ ಬರಬೇಕಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹತ್ತು ವಾರಗಳ ಕಾಲಾವಕಾಶ ನೀಡಬೇಕು” ಎಂದು ವಿನಂತಿಸಿದರು.

ಆಗ ಪೀಠವು “ನೀವು (ಎನ್‌ಎಚ್‌ಎಐ) ಹತ್ತು ವಾರಗಳ ಕಾಲಾವಕಾಶ ಕೋರುತ್ತಿದ್ದೀರಿ. ಇದು ದೀರ್ಘವಾಯಿತು” ಎಂದಿತು.

ಈ ಮಧೆ, ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣವು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಇದನ್ನೂ ಎನ್‌ಎಚ್‌ಎಐ ಪರಿಶೀಲಿಸಬಹುದಾಗಿದೆ” ಎಂದರು.

ಪೀಠವು ತನ್ನ ಮುಂದೆ ಇರಿಸಲಾದ ಅಂಶಗಳನ್ನು ಪರಿಗಣಿಸಿದ ನಂತರ, “2022ರ ನವೆಂಬರ್‌ 2ರ ಆದೇಶಕ್ಕೆ ಅನುಗುಣವಾಗಿ 2023ರ ಫೆಬ್ರವರಿ 6ರಂದು ಎನ್‌ಎಚ್‌ಎಐ ಅಫಿಡವಿಟ್‌ ಸಲ್ಲಿಸಿದೆ. ಗುಣಮಟ್ಟ ನಿಯಂತ್ರಣ ತಪಾಸಣಾ ತಂಡಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಿಬಿಎಂಪಿಯ ಪಶ್ಚಿಮ, ಬೊಮ್ಮನಹಳ್ಳಿ, ದಕ್ಷಿಣ ಮತ್ತು ಯಲಹಂಕ ವಲಯದಲ್ಲಿ ತಪಾಸಣೆ ನಡೆಸಿದ್ದಾರೆ. ರಸ್ತೆ ಗುಂಡಿಗಳ ದೃಷ್ಟಿಗೋಚರ ಪರಿಶೀಲನೆ ನಡೆಸಿದ್ದು,‌ ರಸ್ತೆ ನಿರ್ಮಿಸಲು ನಿರ್ದಿಷ್ಟ ವಸ್ತುಗಳನ್ನು ಬಳಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿವಿಧೆಡೆ ರಸ್ತೆಯ ಮಾದರಿ ಸಂಗ್ರಹಿಸಲಾಗಿದೆ. ಇದನ್ನು ಉಪ ವಿಭಾಗೀಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಫಲಿತಾಂಶಕ್ಕೆ ಕಾಯಲಾಗುತ್ತಿದ್ದು, ಗುಣಮಟ್ಟ ನಿಯಂತ್ರಣ ತಪಾಸಣಾ ತಂಡವು ತರಬೇತಿಗಾಗಿ ದೆಹಲಿಗೆ ತೆರಳಬೇಕಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ" ಎಂದು ಆದೇಶದಲ್ಲಿ ದಾಖಲಿಸಿತು.

ಬಿಬಿಎಂಪಿ ವಕೀಲ ವಿ ಶ್ರೀನಿಧಿ ಅವರ ಸಲಹೆಯನ್ನು ಸ್ವಾಗತಿಸಿದ್ದು, ಬಿಬಿಎಂಪಿ ಕೈಗೊಂಡಿರುವ ರಸ್ತೆ ಅಗಲೀಕರಣದ ಕೆಲಸವನ್ನೂ ಗುಣಮಟ್ಟ ನಿಯಂತ್ರಣ ತಪಾಸಣಾ ತಂಡವು ಪರಿಶೀಲಿಸಲಿದೆ ಎಂದು ಎನ್‌ಎಚ್‌ಎಐ ಪ್ರತಿನಿಧಿಸಿದ್ದ ಎಎಸ್‌ಜಿ ಶಾಂತಿಭೂಷಣ್‌ ತಿಳಿಸಿದ್ದಾರೆ. ಪ್ರಕರಣದಲ್ಲಿನ ತುರ್ತು ಮತ್ತು ವಿಷಯವನ್ನು ಪರಿಗಣಿಸಿ ವರದಿ ನೀಡಲು ಎಂಟು ವಾರ ನೀಡುವುದು ಸೂಕ್ತ ಎಂದು ಭಾವಿಸಿ, ಎಂಟು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.