Vakeelara Bhavana, AAB 
ಸುದ್ದಿಗಳು

[ರಸ್ತೆ ರಂಪಾಟ ಪ್ರಕರಣ] ಅಕ್ರಮವಾಗಿ ಸ್ಥಳೀಯರಿಬ್ಬರನ್ನು ಬಂಧಿಸಿದ್ದ ಪೊಲೀಸರ ಅಮಾನತಿಗೆ ಎಎಬಿ ಆಗ್ರಹ

ಯುವಕನೊಬ್ಬನಿಗೆ ನ್ಯಾಯಾಧೀಶೆ ಧಮಕಿ ಹಾಕುತ್ತಿರುವ ಹಾಗೂ ಸ್ಥಳಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ಕರೆಯಿಸಿ ಆ ಯುವಕನ ಕಪಾಳಕ್ಕೆ ಹೊಡೆಸಿರುವ ರೀತಿ, ಆಗ ಗಾಯತ್ರಿ ಆಡಿರುವ ದರ್ಪದ ಮಾತುಗಳು ಅವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿವೆ ಎಂದಿರುವ ಎಎಬಿ.

Bar & Bench

ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಗಾಯತ್ರಿ ಅವರ ಒತ್ತಡದ ಮೇರೆಗೆ ಸ್ಥಳೀಯ ಇಬ್ಬರು ಮುಗ್ಧ ವ್ಯಕ್ತಿಗಳನ್ನು ಅಕ್ರಮವಾಗಿ ಬಂಧಿಸಿಟ್ಟ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ ಎ ಸಲೀಂ ಅವರಿಗೆ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್‌ ಗೌಡ, ಉಪಾಧ್ಯಕ್ಷ ಸಿ ಎಸ್‌ ಗಿರೀಶ್‌ ಕುಮಾರ್‌ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಸಹಿ ಮಾಡಿರುವ ನಾಲ್ಕು ಪುಟಗಳ ಮನವಿಯನ್ನು ಸಲೀಂ ಅವರಿಗೆ ಸಲ್ಲಿಸಲಾಗಿದೆ.

ಶ್ರೀಸಾಮಾನ್ಯರೊಬ್ಬರ ಜೊತೆ ನ್ಯಾಯಾಧೀಶೆ ಗಾಯತ್ರಿ ಅವರು ನಡೆದುಕೊಂಡಿರುವ ಅನುಚಿತ ನಡವಳಿಕೆ ಗಂಭೀರವಾದುದು. ಯುವಕನೊಬ್ಬನಿಗೆ ನ್ಯಾಯಾಧೀಶೆ ಮತ್ತು ಅವರ ಪತಿ ಧಮಕಿ ಹಾಕುತ್ತಿರುವ ಹಾಗೂ ಸ್ಥಳಕ್ಕೆ ಕೋರ್ಟ್‌ ಪೊಲೀಸ್ ಕಾನ್‌ಸ್ಟೆಬಲ್ ಕರೆಯಿಸಿ ಆ ಯುವಕನ ಕಪಾಳಕ್ಕೆ ಹೊಡೆಸಿರುವ ರೀತಿ, ಆಗ ಗಾಯತ್ರಿ ಆಡಿರುವ ದರ್ಪದ ಮಾತುಗಳು ಅವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಐದು ದಿನಗಳ ನಂತರ ಬೈಕ್‌ನಲ್ಲಿ ಅಡ್ಡಬಂದು ಗಾಯತ್ರಿ ಅವರ ಖಾಸಗಿ ಕಾರಿಗೆ ಕೈಮಾಡಿದ ಎಂದು ಆರೋಪಿಸಲಾದ ಯುವಕ ಕೆ ಎಂ ವಿನಯ್‌ ಮತ್ತು 70 ವರ್ಷದ ಯುವಕನ ಅಜ್ಜ ಪಿ ವೆಂಕಟೇಶ್‌ ಅವರನ್ನು ಪೊಲೀಸ್‌ ಠಾಣೆಗೆ ಕರೆಯಿಸಿಕೊಂಡು ರಾತ್ರಿ–ಹಗಲು ಅಕ್ರಮವಾಗಿ ಬಂಧಿಸಿ ಇರಿಸಲಾಗಿದೆ. ಇದು ಸಂಪೂರ್ಣವಾಗಿ ಪೊಲೀಸರ ಕರ್ತವ್ಯಲೋಪ ಎಂದು ದೂರಲಾಗಿದೆ.

ಕೇವಲ ನ್ಯಾಯಾಧೀಶರೊಬ್ಬರ ನಿರ್ದೇಶನದ ಮೇರೆಗೆ ಪೊಲೀಸರು ಶ್ರೀಸಾಮಾನ್ಯರನ್ನು ಠಾಣೆಗೆ ಎತ್ತಿಹಾಕಿಕೊಂಡು ಬಂದಿದ್ದಾರೆ. ಆ ಸಂದರ್ಭದಲ್ಲಿ ಗಾಯತ್ರಿ ಅವರು ಠಾಣೆಯ ಹೊರಗೆ ಕಾರಿನಲ್ಲಿ ಕುಳಿತು ಎಲ್ಲವನ್ನೂ ವೀಕ್ಷಿಸಿದ್ದಾರೆ. ಇಬ್ಬರನ್ನೂ ರಾತ್ರಿ 10 ಗಂಟೆಗೆ ಠಾಣೆಗೆ ಕರೆತಂದು ಅಕ್ರಮ ಬಂಧನದಲ್ಲಿ ಇರಿಸಿ ಮರುದಿನ ಸಂಜೆ 6 ಗಂಟೆಗೆ ಅಲ್ಲಿಂದ ಬಿಡುಗಡೆ ಮಾಡಲಾಗಿದೆ. ಮಧ್ಯರಾತ್ರಿ 1 ಗಂಟೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯುವಕನಿಂದ ಒತ್ತಾಯಪೂರ್ವಕವಾಗಿ ಜಡ್ಜ್ ಅವರಿಂದ ಯಾವುದೇ ತಪ್ಪಾಗಿಲ್ಲ ಎಂಬ ಮೌಖಿಕ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮೂಲಕ ದಾಖಲಿಸಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇಡೀ ಘಟನೆಯಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಕೇವಲ ನ್ಯಾಯಾಧೀಶರ ಅವರ ಮೌಖಿಕ ಆಣತಿಯನ್ನು ಕುರುಡಾಗಿ ಪಾಲಿಸಿ ಅವರನ್ನು ತೃಪ್ತಿಪಡಿಸುವ ರೀತಿ ವರ್ತಿಸಿದ್ದಾರೆ. ಈ ಘಟನೆ ಇಡೀ ರಾಜ್ಯದ ಜನತೆಯ ಗಮನ ಸೆಳೆದಿದೆ. ಗಾಯತ್ರಿ ಮತ್ತು ಅವರ ಪತಿ ದಾಮೋದರ್ ಯುವಕ ಹಾಗೂ ಆತನ ತಾಯಿಯ ಜೊತೆಗೆ ಅತ್ಯಂತ ಕೀಳಾಗಿ ನಡೆದುಕೊಂಡಿದ್ದಾರೆ. ಇಡೀ ಘಟನೆಯಲ್ಲಿ ಪೊಲೀಸರು ಗಾಯತ್ರಿ ಅವರ ನೌಕರರೇನೊ ಎಂಬಂತೆ ವರ್ತಿಸಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಆದ್ದರಿಂದ, ಈ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕು ಎಂದು ಕೋರಿದ್ದಾರೆ.

New Doc 07-31-2026 17.58.pdf
Preview