ರೋಡ್ ರೇಜ್ ಗದ್ದಲದ ಮುಂದುವರಿದ ಭಾಗವಾಗಿ ಬಾನೆಟ್ ಮೇಲೆ ಏರಿದ್ದ ದೂರುದಾರನನ್ನು ಲೆಕ್ಕಿಸಿದೇ ವಾಹನ ಚಲಾಯಿಸಿದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆ ನೀಡಿದೆ.
ಬೆಂಗಳೂರಿನ ಆರ್ ಸುರೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಂಡು ಅವರಿಗೆ ಕಿರುಕುಳ ನೀಡಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ಮಾಡಿದೆ.
ಅರ್ಜಿದಾರರ ಪರ ವಕೀಲ ಶತಭಿಷ್ ಶಿವಣ್ಣ ಅವರು “ಘಟನೆಯನ್ನು ರೆಕಾರ್ಡ್ ಮಾಡಿ ಯಾರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ” ಎಂದರು.
ಆಗ ಪೀಠವು “ದೂರುದಾರ ಬಾನೆಟ್ ಮೇಲೆ ಹೇಗೆ ಬಂದ? ಅದಾಗ್ಯೂ ನೀವು ವಾಹನ ಚಲಾಯಿಸಿದ್ದು ಏಕೆ? ಸಾಮಾಜಿಕ ಮಾಧ್ಯಮ ಏನು ಮಾಡಿದೆಯೋ ಅದು ಬಿಡಿ. ಆತ ಬಾನೆಟ್ ಮೇಲೆ ಏರಿದಾಗ ನೀವೇಕೆ ವಾಹನ ನಿಲ್ಲಿಸಲಿಲ್ಲ? ಆತ ಹೇಗೆ ಬಾನೆಟ್ ಮೇಲೆ ಬಂದನೋ ಬಿಡಿ, ನೀವು ಕಾರನ್ನು ಮುಂದಕ್ಕೆ ಚಲಾಯಿಸಿದ್ದು ಏಕೆ? ನೀವು ಕಾರು ನಿಲ್ಲಿಸಿ ಬಿಡಬೇಕಿತ್ತು” ಎಂದಿತು.
ಆಗ ಶತಭಿಷ್ ಅವರು “ಅರ್ಜಿದಾರರು ಭಯದಿಂದ ಹಾಗೆ ಮಾಡಿದ್ದಾರೆ. ದೂರುದಾರ ಹೇಗೆ ಬಾನೆಟ್ ಮೇಲೆ ಬಂದ ಎಂಬುದು ಸ್ಪಷ್ಟವಾದರೆ ಅರ್ಜಿದಾರ ಏಕೆ ಕಾರು ಚಲಾಯಿಸಿದ ಎಂಬುದು ತಿಳಿಯಲಿದೆ. ರೋಡ್ ರೇಜ್ ಘಟನೆಯಾದ ತಕ್ಷಣ ಅರ್ಜಿದಾರರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ಆ ಪೊಲೀಸರು ಬಾನೆಟ್ ಮೇಲೆ ಬಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಆದರೆ, ತಿರುಚಿದ ವಿಡಿಯೊ ವೈರಲ್ ಆಗುತ್ತಿದ್ದಂತೆ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದರು.
ಇದಕ್ಕೆ ಪೀಠವು “ಇದು ಸಾಮಾಜಿಕ ಮಾಧ್ಯಮ ಸೃಷ್ಟಿಸಿದ ಸಮಸ್ಯೆ” ಎಂದಿತು.
ಶತಭಿಷ್ ಶಿವಣ್ಣ “ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡುತ್ತಿದ್ದಂತೆ ಪೊಲೀಸರು ತಕ್ಷಣ ಸುರೇಶ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜನರಿಗೆ ಎಷ್ಟು ಬೇಗ ಕ್ರಮಕೈಗೊಂಡಿದ್ದೇವೆ ಎಂಬುದನ್ನು ತೋರಿಸಲು ಪೊಲೀಸರು ಹೀಗೆ ಮಾಡಿದ್ದಾರೆ. ದೂರುದಾರ ನಂಜುಂಡ ಪ್ರಕರಣ ದಾಖಲಿಸಲು ಇಚ್ಛಿಸಿರಲಿಲ್ಲ. ಹೂವು ಡೆಲಿವರಿಗೆ ತೆರಳುತ್ತಿದ್ದು, ಅದನ್ನು ಸರಿಯಾದ ಸಮಯಕ್ಕೆ ತಲುಪಿಸದೇ ಇರುವುದರಿಂದ ಒಂದು ಲಕ್ಷ ಅಥವಾ ಐವತ್ತು ಸಾವಿರ ನಷ್ಟವಾಗುತ್ತಿದೆ. ಅದನ್ನು ನೀಡುವಂತೆ ನಂಜುಂಡ ಹೇಳಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವಂತೆ ಆತನಿಗೆ ಬೆದರಿಸಿದ್ದಾರೆ” ಎಂದರು.
ಇದಕ್ಕೆ ಆಕ್ಷೇಪಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಯಾರನ್ನೂ ಬಲವಂತ ಮಾಡಬೇಕಿಲ್ಲ. ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬಹುದು. ವೈರಲ್ ಆಗಿರುವ ವಿಡಿಯೊ ಎಲ್ಲವನ್ನೂ ಹೇಳುತ್ತದೆ. ಬೆಂಗಳೂರು ನಗರದಲ್ಲಿ ಇಂಥ ಘಟನೆ ನಡೆಯಲು ಬಿಡಬಹುದೇ.. ಇದು ದುರದೃಷ್ಟಕರ” ಎಂದರು.
ಇದೆಲ್ಲವನ್ನೂ ಆಲಿಸಿದ ಪೀಠವು ರಜಾಕಾಲದ ಬಳಿಕ ಪ್ರಕರಣ ವಿಚಾರಣೆ ನಡೆಸಲಾಗುವುದು. ಅಲ್ಲಿಯವರಿಗೆ ಬಲವಂತದ ಕ್ರಮಕೈಗೊಳ್ಳಬಾರದು. ಎಲ್ಲರ ವಾದಗಳಿಗೂ ಉತ್ತರಿಸಲಾಗುವುದು ಎಂದಿತು. ಅಲ್ಲದೇ, ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 5 ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಫೆಬ್ರವರಿ 11ರಂದು ಎಸ್‌ಯುವಿ ವಾಹನದ ಚಾಲಕ ಆರ್ ಸುರೇಶ್ ಮತ್ತು ದೂರುದಾರ ನಂಜುಂಡ ನಡುವೆ ರಸ್ತೆಯಲ್ಲಿ ವಾಗ್ವಾದ ನಡೆದಿತ್ತು. ಸಂಬಂಧಿಯೊಬ್ಬರೊಂದಿಗೆ ಹೂವು ಕೊಂಡೊಯ್ಯುತ್ತಿದ್ದ ನಂಜುಂಡನ ವಾಹನದ ಹಿಂದೆ ಇದ್ದ ಸುರೇಶ್ ಅವರು ಪದೇಪದೇ ಹಾರ್ನ್ ಮಾಡಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಸುರೇಶ್ ಅಲ್ಲಿಂದ ತೆರಳಲು ಮುಂದಾದಾಗ ನಂಜುಂಡ ಕಾರಿನ ಬಾನೆಟ್ ಮೇಲೆ ಏರಿ ಕುಳಿತಿದ್ದನು. ಇದನ್ನು ಲೆಕ್ಕಿಸದೇ ಸುರೇಶ್ ಮುನ್ನಡೆದಿದ್ದು, ಸಾರ್ವಜನಿಕರ ಮಧ್ಯಪ್ರವೇಶದಿಂದ ಕಾರನ್ನು ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ವಿರುದ್ಧ ಕೊಲೆ ಯತ್ನ ಮತ್ತು ಶಾಂತಿಗೆ ಭಂಗ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿತ್ತು.