ಕಾರ್ಯಾಂಗ ಮತ್ತು ನ್ಯಾಯಾಂಗ ಒಟ್ಟಾಗಿ ಕೆಲಸ ಮಾಡಿದರೆ ಭಾರತವು ಸಿಂಗಪೋರ್‌ನಂತೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗಬಹುದು ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಭಾನುವಾರ ಆಯೋಜಿಸಿದ್ದ 'ದೆಹಲಿ ಮಧ್ಯಸ್ಥಿಕೆ ಸಪ್ತಾಹ 2023'ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಏಕರೂಪದ ನಿಯಮಗಳ ಜೊತೆಗೆ ನ್ಯಾಯಾಂಗ ಮತ್ತು ಕಾರ್ಯಾಂಗ ಇವೆರಡರ ಬೆಂಬಲವೂ ಇದಕ್ಕೆ ಬೇಕಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಸಿಂಗಪೋರ್‌ನ ಯಶೋಗಾಥೆಯನ್ನು ವಿವರಿಸುತ್ತಾ “ದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವು ಮಧ್ಯಸ್ಥಿಕೆಗಾಗಿ 6,373 ಪ್ರಕರಣಗಳನ್ನು ಪಟ್ಟಿಮಾಡಿದೆ ಮತ್ತು 2022ರಲ್ಲಿ 4,900 ಪ್ರಕರಣಗಳನ್ನು ಆಲಿಸಲಾಗಿದೆ. ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಸಿಂಗಪೋರ್‌ನ ಯಶಸ್ಸಿನ ಕಥೆಯನ್ನು ನೆನಪಿಸಿಕೊಳ್ಳುವುದು ಅತ್ಯಗತ್ಯ ಎಂದು ಭಾವಿಸುತ್ತೇನೆ. ಇಂದು ಯಾರು ಬೇಕಾದರೂ ದೆಹಲಿಯನ್ನು ಯಾವುದೇ ಭಾಗದಿಂದ ತಲುಪಬಹುದು. ಭಾರತವು ಭೌಗೋಳಿಕವಾಗಿ ದೂರದಲ್ಲಿದೆ ಎಂದು ನಾನು ಭಾವಿಸುವುದಿಲ್ಲ. ಸಿಂಗಪೋರ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗಬಹುದಾದರೆ, ಭಾರತಕ್ಕೆ ಏಕೆ ಸಾಧ್ಯವಿಲ್ಲ? ಭಾರತೀಯರನ್ನು ಹೊರತುಪಡಿಸಿ ಯಾರೂ ಭಾರತವನ್ನು ತಡೆಯಲು ಸಾಧ್ಯವಿಲ್ಲ, " ಎಂದು ಅವರು ಹೇಳಿದರು.
ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಭಾರತ ಜಾಗತಿಕ ಕೇಂದ್ರವಾಗಬೇಕಾದರೆ ಆ ಕ್ಷೇತ್ರದಲ್ಲಿನ ಅಂತಾರಾಷ್ಟ್ರೀಯ ರೂಢಿಗಳನ್ನು ಪಾಲಿಸಬೇಕು. ಬಹುತೇಕರು ತಾತ್ಕಾಲಿಕ ಮಧ್ಯಸ್ಥಿಕೆಗೇ ಆದ್ಯತೆ ನೀಡುವುದರಿಂದ ಅದು ನ್ಯಾಯಾಂಗ ಹಸ್ತಕ್ಷೇಪಕ್ಕೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. ವಿಶ್ವಬ್ಯಾಂಕ್ ವರದಿಯ ಪ್ರಕಾರ ವಾಜ್ಯವೊಂದರ ಪರಿಹಾರಕ್ಕೆ ಸರಾಸರಿ 1,145 ದಿನಗಳನ್ನು ನಮ್ಮ ನ್ಯಾಯಾಂಗವು ತೆಗೆದುಕೊಳ್ಳುತ್ತಿದ್ದು ಈ ದೀರ್ಘ ಅವಧಿಯ ಬಗ್ಗೆ ದೇಶ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಗದ ರಹಿತ ನ್ಯಾಯಾಲಯಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು ಈ ಉದ್ದೇಶವನ್ನಿಟ್ಟುಕೊಂಡೇ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಇ- ಕೋರ್ಟ್‌ಗಳಿಗೆ ಹಣ ಮೀಸಲಿರಿಸಿದೆ ಎಂದರು.
ಮಧ್ಯಸ್ಥಗಾರರಿಗೆ ಸಹಾಯ ಮಾಡಲು ಮತ್ತು ತೀರ್ಪುಗಳ ಕರಡು ರಚನೆಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆಯನ್ನು ಬಳಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಪ್ರಸ್ತಾವಿತ ಮಧ್ಯಸ್ಥಿಕೆ ಮಸೂದೆಯ ಕರಡನ್ನು ಸಂಸದೀಯ ಸಮಿತಿಗೆ ಸಲ್ಲಿಸಲಾಗಿದ್ದು ಅದರಲ್ಲಿ ಆಗಬೇಕಾದ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು.