ದೇಶದಲ್ಲಿ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸುವ ಮೂಲಕ ರೋ ಮತ್ತು ವೇಡ್ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ - (ಎಸ್‌ಸಿಒಟಿಯುಎಸ್) ಶುಕ್ರವಾರ ರದ್ದುಗೊಳಿಸಿತು.
ಅಮೆರಿಕದ ವಿವಿಧ ರಾಜ್ಯಗಳಲ್ಲಿ ಗರ್ಭಪಾತದ ಕಾನೂನುಬದ್ಧತೆಯನ್ನು ವ್ಯಕ್ತಿಗಳಿಗೆ ನಿರ್ಧರಿಸಲು ಬಿಟ್ಟು 1973ರಲ್ಲಿ ತಾನು ನೀಡಿದ್ದ ತೀರ್ಪನ್ನು ನ್ಯಾಯಾಲಯ 5-4 ಮತಗಳಿಂದ ರದ್ದುಗೊಳಿಸಿತು. ಐವರು ನ್ಯಾಯಮೂರ್ತಿಗಳು ಗರ್ಭಪಾತವನ್ನು ಹಕ್ಕು ಎಂದು ಪರಿಗಣಿಸುವುದನ್ನು ರದ್ದುಗೊಳಿಸುವ ಪರ ಮತ ಚಲಾಯಿಸಿದರೆ ನಾಲ್ವರು ನ್ಯಾಯಮೂರ್ತಿಗಳು ಅದಕ್ಕೆ ವ್ಯತಿರಿಕ್ತವಾಗಿ ಮತಚಲಾಯಿಸಿದರು.
"ಸಂವಿಧಾನವು ಗರ್ಭಪಾತದ ಹಕ್ಕನ್ನು ನೀಡುವುದಿಲ್ಲ; ರೋ ಮತ್ತು ಕೇಸಿ ಪ್ರಕರಣವನ್ನು ರದ್ದುಗೊಳಿಸಲಾಗಿದೆ; ಮತ್ತು ಗರ್ಭಪಾತವನ್ನು ನಿಯಂತ್ರಿಸುವ ಅಧಿಕಾರವನ್ನು ಜನರು ಮತ್ತು ಅವರ ಚುನಾಯಿತ ಪ್ರತಿನಿಧಿಗಳಿಗೆ ಮರಳಿಸಲಾಗುತ್ತಿದೆ" ಎಂದು ತೀರ್ಪು ತಿಳಿಸಿತು. ಭ್ರೂಣಕ್ಕೆ 15 ವಾರಗಳಿಗಿಂತ ಹೆಚ್ಚು ಅವಧಿಯಾಗಿದ್ದರೆ ಗರ್ಭಪಾತ ನಿಷೇಧಿಸುವ ಮಿಸಿಸ್ಸಿಪ್ಪಿ ರಾಜ್ಯದ ಕಾನೂನನ್ನು ಕೂಡ 6-3 ಬಹುಮತದಿಂದ ನ್ಯಾಯಾಲಯ ಎತ್ತಿಹಿಡಿಯಿತು.
ಮಹಿಳೆಯೊಬ್ಬರಿಗೆ ತನ್ನ ಗರ್ಭಾವಸ್ಥೆ ಅಂತ್ಯಗೊಳಿಸುವ ಕುರಿತಂತೆ ನಿರ್ಧರಿಸಲು 15 ವಾರಗಳಷ್ಟು ಅವಧಿ ಸಾಕಷ್ಟು ಅವಕಾಶ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರು ರೋ ಮತ್ತು ವೇಡ್ ಪ್ರಕರಣದ ತೀರ್ಪಿನ ವಿರುದ್ಧ ಮತ ಚಲಾಯಿಸುವ ಸಂದರ್ಭದಲ್ಲಿ ತಿಳಿಸಿದರು.
ಡಾಬ್ಸ್ ಮತ್ತು ಜಾಕ್ಸನ್ ಮಹಿಳಾ ಆರೋಗ್ಯ ಸಂಸ್ಥೆ ನಡುವಣ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿತು. ಪ್ರಕರಣದಲ್ಲಿ ಮಿಸಿಸ್ಸಿಪ್ಪಿ ಸರ್ಕಾರ. ರೋ ಮತ್ತು ವೇಡ್ ಪ್ರಕರಣದ ತೀರ್ಪನ್ನು ಅಮಾನ್ಯಗೊಳಿಸಬೇಕು ಮತ್ತು ಗರ್ಭಪಾತವನ್ನು ನಿಯಂತ್ರಿಸಬೇಕೆ ಅಥವಾ ನಿಷೇಧಿಸಬೇಕೆ ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡಬೇಕು ಎಂದು ಅದು ವಾದಿಸಿತ್ತು.
ರೋ ಮತ್ತು ವೇಡ್ ಪ್ರಕರಣದಲ್ಲಿ ಅನುಮತಿಸಲಾಗಿದ್ದಕ್ಕಿಂತಲೂ ಸುಮಾರು ಎರಡು ತಿಂಗಳ ಮೊದಲೇ ಅಂದರೆ 15 ವಾರಗಳ ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವನ್ನು ನಿಷೇಧಿಸುವ 2018ರ ಮಿಸ್ಸಿಸ್ಸಿಪ್ಪಿ ಕಾನೂನನ್ನು ಡಾಬ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎತ್ತಿಹಿಡಿದಿದೆ.
ಗರ್ಭಪಾತ ಅಮೆರಿಕಾದ ರಾಜಕೀಯದಲ್ಲಿ ವಿಭಜನೀಯ ಸಮಸ್ಯೆಯಾಗಿ ಉಳಿದಿದ್ದು ರೋಯ್ ಮತ್ತು ವೇಡ್ ಪ್ರಕರಣದ ತೀರ್ಪನ್ನು ಕಾನೂನಾಗಿ ಜಾರಿಗೆ ತರಲು ಅಮೆರಿಕ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ.
ಬಹುಪಾಲು ಸಂಪ್ರದಾಯವಾದಿ ನ್ಯಾಯಮೂರ್ತಿಗಳೇ ಇರುವ ಪ್ರಸ್ತುತ ಸ್ಥಿತಿ ಗಮನಿಸಿದರೆ ನ್ಯಾಯಾಲಯ ಮಿಸಿಸ್ಸಿಪ್ಪಿ ಕಾನೂನು ಎತ್ತಿ ಹಿಡಿದು ಗರ್ಭಪಾತದ ಸಮಸ್ಯೆಯನ್ನು ರಾಜ್ಯಗಳಿಗೆ ಮತ್ತೆ ಮರಳಿಸಲು ಸಿದ್ಧವಾಗಿದೆ.
ಪ್ರಕರಣದ ಆರಂಭಿಕ ಕರಡು ಅಭಿಪ್ರಾಯ ಕಳೆದ ತಿಂಗಳು ಸೋರಿಕೆಯಾಗಿತ್ತು. ಅದರ ಪ್ರಕಾರ ನ್ಯಾಯಾಲಯ ರೋ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಗರ್ಭಪಾತ ಹಕ್ಕುಗಳಿಗಾಗಿ ಒಕ್ಕೂಟ ಸರ್ಕಾರ ನೀಡಿರುವ ರಕ್ಷಣೆಯನ್ನು ಹಿಂತೆಗೆದುಕೊಳ್ಳಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿತ್ತು. ತೀರ್ಪಿಗೆ ಮೊದಲೇ, ಫ್ಲೋರಿಡಾ, ಕೆಂಟುಕಿ, ಒಕ್ಲಹೊಮಾದಂತಹ ಕೆಲ ರಾಜ್ಯಗಳು ನಿರ್ಬಂಧಿತ ಗರ್ಭಪಾತ ಕಾನೂನುಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದವು.
ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ: