Byrati Basavaraj 
ಸುದ್ದಿಗಳು

ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ: ಬಿಜೆಪಿ ಶಾಸಕ ಬೈರತಿ ಬಸವರಾಜಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಶಿವಪ್ರಕಾಶ್‌ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು.

Bar & Bench

ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಬೈರತಿ ಬಸವರಾಜ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಗುರುವಾರ ಪುರಸ್ಕರಿಸಿ ಆದೇಶಿಸಿದರು.

ಅರ್ಜಿದಾರರು ₹2 ಲಕ್ಷ ಮೊತ್ತದ ಬಾಂಡ್‌ ಮತ್ತು ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಅವರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಕೂಡದು. ಪ್ರಕರಣದ ತನಿಖಾಧಿಕಾರಿ ಕರೆದಾಗಲೆಲ್ಲಾ ಹೋಗಬೇಕು ಮತ್ತು ತನಿಖೆಗೆ ಸಹಕರಿಸಬೇಕು. ಅನಗತ್ಯ ಮುದ್ದತುಗಳನ್ನು ಬೇಡದೆ ವಿಚಾರಣಾ ಕೋರ್ಟ್‌ಗೆ ನಿಯಮಿತವಾಗಿ ಹಾಜರಾಗಬೇಕು. ಮೂರು ತಿಂಗಳ ಕಾಲ ಯಾವುದೇ ಎರಡನೇ ಭಾನುವಾರದಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆಯದೆ ವಿದೇಶಕ್ಕೆ ತೆರಳುವುದಿಲ್ಲ ಎಂಬ ಪ್ರಮಾಣಪತ್ರವನ್ನು ಕಾಯಂ ವಿಳಾಸ, ಮೊಬೈಲ್‌ ನಂಬರ್‌, ಇ–ಮೇಲ್‌ ವಿಳಾಸ, ಪಾಸ್‌ಪೋರ್ಟ್‌ ನಂಬರ್‌ ಉಳ್ಳ ಮುಚ್ಚಳಿಕೆ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಶಿವಪ್ರಕಾಶ್‌ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಸಂಬಂಧ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದಲ್ಲಿ ಬೈರತಿ ಬಸವರಾಜ ಐದನೇ ಆರೋಪಿಯಾಗಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್‌ 103 ಮತ್ತು 190ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

B A Basavaraj Vs Bharatinagar PS.pdf
Preview