Justice S Vishwajith Shetty and Karnataka High Court 
ಸುದ್ದಿಗಳು

ರೌಡಿ ಶೀಟರ್‌ ಮಹೇಶ್‌ ಕೊಲೆ: ವಿಲ್ಸನ್‌ ಗಾರ್ಡನ್‌ ನಾಗ ಸೇರಿ ಆರು ಮಂದಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಆರೋಪಿಗಳ ವಿರುದ್ಧದ ಎಲ್ಲಾ ಆರೋಪಗಳು ಮತ್ತು ಪ್ರಕರಣದ ಗಂಭೀರತೆ, ಸಾಕ್ಷ್ಯಗಳ ಸ್ವರೂಪ ಮತ್ತು ಆರೋಪಿಗಳ ಪೂರ್ವಾಪರ ಪರಿಗಣಿಸಿದಾಗ ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದಿರುವ ನ್ಯಾಯಾಲಯ.

Bar & Bench

ರೌಡಿ ಶೀಟರ್‌ ಮಹೇಶ್‌ ಕೊಲೆ ಪ್ರಕರಣ ಸಂಬಂಧ ಜೆ ನಾಗರಾಜು ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗ ಸೇರಿದಂತೆ ಆರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ನಿರಾಕರಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಒಂದನೇ ಆರೋಪಿ ಜೆ ನಾಗರಾಜು ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗ, ಎರಡನೇ ಆರೋಪಿ ಮೋಹನ ಅಲಿಯಾಸ್ ಡಬಲ್ ಮೀಟರ್‌ ಮೋಹನ್‌, ಒಂಭತ್ತನೇ ಆರೋಪಿ ಎ ನವೀನ್‌ ಕುಮಾರ್‌, 11ನೇ ಆರೋಪಿ ಗೋಕುಲ್‌, ಆರೋಪಿ 14ನೇ ಆರೋಪಿ ಬಿ ಸುರೇಶ್‌ ಬಾಬು ಮತ್ತು 16ನೇ ಆರೋಪಿ ದಿನೇಶ್‌ ಅಲಿಯಾಸ್‌ ಡಿಯೋ ದಿನಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಅರ್ಜಿದಾರ ಆರೋಪಿಗಳ ಪೂರ್ವಾಪರ ಮತ್ತು ಪ್ರಕರಣದಲ್ಲಿನ ಆರೋಪಗಳ ಗಂಭೀರತೆ ಪರಿಶೀಲಿಸಿದಾಗ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಸಾಮರ್ಥ್ಯ ಆರೋಪಿಗಳಿಗೆ ಇದೆ. ಪ್ರಕರಣದಲ್ಲಿ ಎಂಟು ಮಂದಿ ಪ್ರತ್ಯಕ್ಷದರ್ಶಿಗಳಿದ್ದಾರೆ. ಅವರುಗಳನ್ನು ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ನಡೆಸುವುದು ಬಾಕಿಯಿದೆ. ಆರೋಪಿಗಳ ವಿರುದ್ಧದ ಎಲ್ಲಾ ಆರೋಪಗಳು ಮತ್ತು ಪ್ರಕರಣದ ಗಂಭೀರತೆ, ಸಾಕ್ಷ್ಯಗಳ ಸ್ವರೂಪ ಮತ್ತು ಆರೋಪಿಗಳ ಪೂರ್ವಾಪರ ಪರಿಗಣಿಸಿದಾಗ ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ವಿಚಾರಣಾಧೀನ ನ್ಯಾಯಾಲಯ ಸೂಕ್ತ ಸಮಯಕ್ಕೆ ಮುಖ್ಯ ವಿಚಾರಣೆ ಆರಂಭಿಸದಿದ್ದರೆ ಆಗ ಜಾಮೀನು ಕೋರಿ ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸುವ ಮುಕ್ತ ಅವಕಾಶ ಹೊಂದಿರುತ್ತಾರೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ರೌಡಿ ಶೀಟರ್‌ ಮಹೇಶ್‌ ಕೊಲೆ ಪ್ರಕರಣವು 2023ರ ಆಗಸ್ಟ್‌ 4ರಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಘಟನೆ ಕುರಿತು ಮೃತನ ಪತ್ನಿ ಮೇಘನಾ ಈರೇಗೌಡ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪರಪ್ಪನ ಅಗ್ರಹಾರ ಠಣಾ ಪೊಲೀಸರು, ವಿಲ್ಸನ್‌ ಗಾರ್ಡನ್‌ ನಾಗ ಸೇರಿದಂತೆ ಇತರೆ ಅರ್ಜಿದಾರ ಆರೋಪಿಗಳನ್ನು ಆಗಸ್ಟ್‌ 6 ಹಾಗೂ 18ರಂದು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ಒಟ್ಟು 27 ಮಂದಿ ವಿರುದ್ಧ ಕೊಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿದಂತೆ ವಿವಿಧ ಆರೋಪಗಳ ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ 2025ರ ಜುಲೈ 11ರಂದು ವಿಚಾರಣಾಧೀನ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಜಾಮೀನು ಕೋರಿ ಎಲ್ಲಾ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.