Justice R Nataraj 
ಸುದ್ದಿಗಳು

ಮೌಖಿಕ ಆದೇಶ ನೀಡಿ ರೌಡಿಶೀಟರ್‌ಗಳ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್‌ ಲಗಾಮು; ಎಸ್‌ಎಂಎಸ್‌, ವಾಟ್ಸಾಪ್‌ ಬಳಕೆಗೆ ಸೂಚನೆ

“ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲದಿದ್ದರೆ, ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸದಿದ್ದರೆ, ಆತನ ಹೆಸರು ರೌಡಿ ಪಟ್ಟಿಯಲ್ಲಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅವರನ್ನು ಮೌಖಿಕ ಸೂಚನೆ ನೀಡಿ ಕರೆಸಬಾರದು” ಎಂದು ನ್ಯಾಯಾಲಯ ಹೇಳಿದೆ.

Bar & Bench

ಮೌಖಿಕ ಆದೇಶ ಅಥವಾ ಸೂಚನೆಗಳನ್ನು ನೀಡಿ ರೌಡಿ ಶೀಟರ್‌ಗಳನ್ನು ಪೊಲೀಸ್‌ ಠಾಣೆಗೆ ಕರೆಸುವುದಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ಹಾಕಿದೆ. ರೌಡಿ ಶೀಟರ್‌ಗಳನ್ನು ಪೊಲೀಸ್‌ ಠಾಣೆಗೆ ಕರೆಸುವುದಕ್ಕೆ ಸರ್ಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸಬೇಕು. ಅಲ್ಲಿಯವರೆಗೆ ಎಸ್‌ಎಂಎಸ್‌, ವಾಟ್ಸಪ್‌ ಮೂಲಕ ಸಂದೇಶ ನೀಡಿ ಪೊಲೀಸ್‌ ಠಾಣೆಗೆ ಕರೆಸಬಹುದು ಎಂದು ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ರೌಡಿಗಳನ್ನು ತನಿಖೆ ಅಥವಾ ವಿಚಾರಣೆಗಾಗಿ ಪೊಲೀಸ್‌ ಠಾಣೆಗಳಿಗೆ ಕರೆಸಲು ಸೂಕ್ತ ಆದೇಶ ಹೊರಡಿಸುವಂತೆ ಗೃಹ ಇಲಾಖೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ರೌಡಿಶೀಟರ್‌ ಸುನೀಲ್‌ ಕುಮಾರ್‌ ಅಲಿಯಾಸ್‌ ಸೈಲೆಂಟ್‌ ಸುನೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

“ಈ ಸಂಬಂಧ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕು. ಅಲ್ಲಿಯವರೆಗೆ ಠಾಣೆಗಳಿಗೆ ರೌಡಿ ಶೀಟರ್‌ಗಳು ಪೊಲೀಸರಿಗೆ ತಮ್ಮ ಮೊಬೈಲ್‌ ನಂಬರ್‌ ನೀಡಬೇಕು. ಪೊಲೀಸರು ಅವರನ್ನು ಮೌಖಿಕವಾಗಿ ಕರೆಯುವ ಬದಲು ಎಸ್‌ಎಂಎಸ್‌, ವಾಟ್ಸಪ್‌ ಸಂದೇಶ ಕಳುಹಿಸಿ ಯಾವಾಗ ಠಾಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಬೇಕು. ಆಗಲೂ ಠಾಣೆಗೆ ಬರದಿದ್ದರೆ ರೌಡಿಶೀಟರ್‌ ಮನೆಗೆ ಪೊಲೀಸರು ತೆರಳಬಹುದು, ಈ ಪ್ರಕ್ರಿಯೆ ಪಾಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

“ಅರ್ಜಿದಾರರು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲದಿದ್ದರೆ ಮತ್ತು ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸದಿದ್ದರೆ, ಆತನ ಹೆಸರು ರೌಡಿ ಪಟ್ಟಿಯಲ್ಲಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅವರನ್ನು ಆಗಾಗ್ಗೆ ಮೌಖಿಕ ಸೂಚನೆ ನೀಡಿ ಕರೆಸಬಾರದು” ಎಂದು ನ್ಯಾಯಾಲಯ ಹೇಳಿದೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ. ದಂಡಾಧಿಕಾರಿಯ ಅಧಿಕಾರವನ್ನು ಈ ಆದೇಶ ಕುಂಠಿತಗೊಳಿಸುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಕಾನೂನಿನಲ್ಲಿ ರೌಡಿ ಶೀಟರ್‌ಗೆ ಸಮನ್ಸ್‌ ನೀಡಲು ಯಾವುದೇ ಕಾರ್ಯ ವಿಧಾನವಿಲ್ಲದಿದ್ದಾಗ, ಪರಿಣಾಮಗಳು ಏನೇ ಇರಲಿ, ಸರ್ಕಾರವು ಅವರನ್ನು ಮೌಖಿಕವಾಗಿ ಸಮನ್ಸ್‌ ನೀಡಿ ಪೊಲೀಸ್‌ ಠಾಣೆಯಲ್ಲಿ ದೀರ್ಘಕಾಲ ಬಂಧನದಲ್ಲಿಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ರಾಜ್ಯವು ರೌಡಿ ಶೀಟರ್‌ನ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನವನ್ನು ಸೂಚಿಸುವ ಯಾವುದೇ ಕಾನೂನನ್ನು ಜಾರಿಗೆ ತರುವವರೆಗೆ, ಅರ್ಜಿದಾರರು ತಮ್ಮ ವಿರುದ್ಧ ರೌಡಿ ಶೀಟ್‌ಗಳನ್ನು ದಾಖಲಿಸಿರುವ ಪೊಲೀಸ್‌ ಠಾಣೆಗಳಿಗೆ ಮೊಬೈಲ್‌ ಸಂಖ್ಯೆಯನ್ನು ಒದಗಿಸಬೇಕು ಮತ್ತು ಪೊಲೀಸರು ಅವರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್‌ ಠಾಣೆಗೆ ಭೇಟಿ ನೀಡುವಂತೆ ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ ಸಂದೇಶವನ್ನು ಕಳುಹಿಸುವ ಮೂಲಕ ಅವರಿಗೆ ತಿಳಿಸಬಹುದು. ಅಗಲೂ ಪೊಲೀಸರ ಮುಂದೆ ಹಾಜರಾಗಲು ವಿಫಲವಾದರೆ, ಅವರು ವಿಚಾರಣೆ ಅಥವಾ ಕಣ್ಗಾವಲುಗಾಗಿ ಅವರ ಮನೆಗೆ ಭೇಟಿ ನೀಡಬಹುದು” ಎಂದು ಪೀಠ ಆದೇಶಿಸಿದೆ.

ಅಲೋಕ್‌ ಕುಮಾರ್‌ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್‌ ಸೈಲೆಂಟ್‌ ಸುನೀಲ್‌ ಕರೆಸಿ ಎಚ್ಚರಿಕೆ ನೀಡಿದ್ದರು. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹೀಗಾಗಿ, ಸೂಕ್ತ ನಿರ್ದೇಶನ ನೀಡುವಂತೆ ಕೋರಿ  ಸೈಲೆಂಟ್‌ ಸುನೀಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿವಿಧ ಪೊಲೀಸ್‌ ಠಾಣೆಗಳಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದೇನೆ. ರೌಡಿ ಶೀಟ್‌ ಹೊರತುಪಡಿಸಿ, ತಮ್ಮ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ. ಆದರೆ, ತಮ್ಮ ಮೇಲೆ ನಿಗಾ ಇಡುವ ನೆಪದಲ್ಲಿ ಯಾವುದೇ ಕಾರಣವಿಲ್ಲದೆ ಬಂಧಿಸುವುದರ ಜೊತೆಗೆ ಮೌಖಿಕವಾಗಿ ಸಮನ್ಸ್‌ ಮಾಡಿ ನಿಂದಿಸುತ್ತಿದ್ದಾರೆ. ಕರ್ನಾಟಕ ಪೊಲೀಸ್‌ ಕೈಪಿಡಿಯಲ್ಲಿ ಅಥವಾ ಭಾರತೀಯ ನ್ಯಾಯ ಸಂಹಿತಾ 2023ರಲ್ಲಿ ರೌಡಿ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಯನ್ನು ಸಮನ್ಸ್‌ ಮಾಡುವ ವಿಧಾನವನ್ನು ಸೂಚಿಸುವ ಯಾವುದೇ ಕಾರ್ಯವಿಧಾನವಿಲ್ಲ. ಆದರೂ ಪ್ರತಿವಾದಿಗಳು ತಮಗೆ ಮೌಖಿಕವಾಗಿ ಸಮನ್‌ ಮಾಡುತ್ತಿದ್ದಾರೆ ಎಂದು ಸುನೀಲ್‌ ನ್ಯಾಯಾಲಯ ಮೆಟ್ಟಿಲೇರಿದ್ದರು.

Sunil Kumar @ Silent Sunil Vs State of Karnataka.pdf
Preview