RSS activist Rudresh and Karnataka HC
RSS activist Rudresh and Karnataka HC The News Minute
ಸುದ್ದಿಗಳು

ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ: ಇಬ್ಬರು ಆರೋಪಿಗಳ ಜಾಮೀನು ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

Bar & Bench

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಇರ್ಫಾನ್‌ ಪಾಷ ಮತ್ತು ಮೊಹಮದ್ ಮುಜೀಬುಲ್ಲಾ ಅವರ ಜಾಮೀನು ಮನವಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ಇರ್ಫಾನ್‌ ಪಾಷ ಮತ್ತು ಮೊಹಮದ್ ಮುಜೀಬುಲ್ಲಾ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಶಿವಶಂಕರ ಅಮರಣ್ಣವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಆರೋಪಿಗಳ ಪರ ಎಸ್‌ ಬಾಲಕೃಷ್ಣನ್‌ ಮತ್ತು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪರ ವಿಶೇಷ ಪ್ರಾಸಿಕ್ಯೂಟರ್ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಪ್ರಕರಣದ ಐವರು ಆರೋಪಿಗಳಾದ ಅಸೀಮ್‌ ಶರೀಫ್‌, ಇರ್ಫಾನ್‌ ಪಾಷಾ, ವಸೀಂ ಅಹಮದ್‌, ಮೊಹಮದ್‌ ಸಾದಿಕ್‌ ಅಲಿಯಾಸ್‌ ಮಜಹರ್‌ ಮತ್ತು ಮೊಹಮ್ಮದ್‌ ಮುಜೀಬುಲ್ಲಾ ಅಲಿಯಾಸ್‌ ಮೌಲಾ ಅವರು 2016ರ ಅಕ್ಟೋಬರ್ 27ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

2016ರ ಅಕ್ಟೋಬರ್‌ 16ರಂದು ಬೆಳಗಿನ ಒಂಭತ್ತು ಗಂಟೆ ಸಮಯದಲ್ಲಿ ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ಗಣವೇಷಧಾರಿಯಾಗಿ ಜ್ಯೂಪಿಟರ್‌ ಬೈಕ್‌ನಲ್ಲಿ ಕುಳಿತಿದ್ದ ರುದ್ರೇಶ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಅಂದು ಆ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.