Supreme Court
Supreme Court 
ಸುದ್ದಿಗಳು

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಆರೋಪಿಗಳ ಖುಲಾಸೆ: ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

Bar & Bench

ಕರ್ನಾಟಕವನ್ನು ತಲ್ಲಣಗೊಳಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಹೋರಾಟಗಾರ ಮತ್ತು ಪತ್ರಕರ್ತ ಲಿಂಗರಾಜು ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮವಾರ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದೆ.

ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿತು.

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜನತಾದಳ (ಜಾತ್ಯತೀತ) ಪಕ್ಷದಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ಸಿ ಗೋವಿಂದರಾಜು, ಅವರ ಪತ್ನಿ ಗೌರಮ್ಮ ಹಾಗೂ ಇತರ 10 ಮಂದಿ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದರು.

ಲಿಂಗರಾಜು ಅವರನ್ನು 2012ರ ನವೆಂಬರ್ 20ರಂದು ಅವರ ಮನೆಯ ಹೊರಗೆ ಹಾಡಹಗಲೇ ಹತ್ಯೆ ಮಾಡಲಾಗಿತ್ತು. ರಾಜಕಾರಣಿಗಳಾದ ಗೋವಿಂದರಾಜು ಮತ್ತು ಗೌರಮ್ಮ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಲಿಂಗರಾಜು ಸಾವಿಗೀಡಾಗುವ ಮುನ್ನ ದಾಖಲಿಸಿದ್ದರು. ಲಿಂಗರಾಜು ಅವರ ಕೊಲೆ ನಡೆಯುವ 11 ದಿನಗಳ ಮೊದಲು, ನವೆಂಬರ್ 9, 2012ರಂದು ಪೊಲೀಸರು ಈ ಇಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು.

ಕೊಲೆ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯವು ಅಕ್ಟೋಬರ್ 28, 2020ರ ತನ್ನ ಆದೇಶದಲ್ಲಿ ಬಾಡಿಗೆ ಹಂತಕರು ಗೋವಿಂದರಾಜು ಹಾಗೂ ಗೌರಮ್ಮ ಸೇರಿದಂತೆ  12 ಮಂದಿಯನ್ನು ಕೊಲೆ ಪ್ರಕರಣದ ಅಪರಾಧಿಗಳೆಂದು ಘೋಷಿಸಿತ್ತು. ಈ ವ್ಯಕ್ತಿಗಳಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು.

ಆದರೆ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ನವೆಂಬರ್ 4, 2022 ರಂದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಈ ಆದೇಶವನ್ನು ರಾಜ್ಯ ಸರ್ಕಾರ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಸರ್ಕಾರದ ಪರವಾಗಿ  ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪನ್ವಾರ್ ಹಾಗೂ ವಕೀಲ ವಿ ಎನ್ ರಘುಪತಿ ವಾದ ಮಂಡಿಸಿದರು.