Sr Counsel Ravindranath Kamath, RTI Activist Vinayaka Baliga and Karnataka HC
Sr Counsel Ravindranath Kamath, RTI Activist Vinayaka Baliga and Karnataka HC 
ಸುದ್ದಿಗಳು

ಬಾಳಿಗಾ ಕೊಲೆ ಪ್ರಕರಣ: ಕಾಮತ್‌ ಅವರನ್ನು ಎಸ್‌ಎಸ್‌ಪಿಯಾಗಿ ನೇಮಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ಹಿರಿಯ ವಕೀಲ ರವೀಂದ್ರನಾಥ ಕಾಮತ್ ಅವರನ್ನು ನೇಮಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಗುರುವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠವು ಆದೇಶ ಮಾಡಿದೆ.

“ಹೊಸ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲು ಅರ್ಜಿಯಲ್ಲಿ 6ನೇ ಪ್ರತಿವಾದಿಯಾಗಿರುವ ಬಾಳಿಗಾ ಸಹೋದರಿ ಅನುರಾಧಾ ಬಾಳಿಗಾ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಕ್ತ ಅವಕಾಶ ಹೊಂದಿದ್ದಾರೆ. ಒಂದೊಮ್ಮೆ ಬಾಳಿಗಾ ಸಹೋದರಿ ಅನುರಾಧಾ ಮನವಿ ಸಲ್ಲಿಸಿದರೆ, ಅರ್ಜಿಯನ್ನು ಕಾನೂನು ಪ್ರಕಾರ ಪರಿಗಣಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು 2016ರ ಮಾರ್ಚ್‌ 21ರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ರವೀಂದ್ರನಾಥ್‌ ಕಾಮತ್ ಅವರನ್ನು ನೇಮಿಸಿ 2016ರ ಡಿಸೆಂಬರ್‌ 21ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ನ್ಯಾಯಾಲಯಗಳಲ್ಲಿ ದೂರುದಾರರ ಪರವಾಗಿ ಮತ್ತು ಮೃತ ಕುಟುಂಬದವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಲ್ಲಿ ರವೀಂದ್ರನಾಥ್ ಕಾಮತ್ ವಾದ ಮಂಡಿಸಿದ್ದಾರೆ. ಕೊಲೆಯ ನಂತರ ನಡೆದ ಹಲವು ಪ್ರತಿಭಟನೆಗಳಲ್ಲಿ ಅವರು ಭಾಗವಹಿಸಿದ್ದರು. ಮೃತರ ತಂದೆ ನಡೆಸಿದ ಸುದ್ದಿಗೋಷ್ಠಿಯಲ್ಲೂ ಪಾಲ್ಗೊಂಡು ನನ್ನ ವಿರುದ್ಧ ಹೇಳಿಕೆ ನೀಡಿದ್ದರು. ಮೃತನ ಕುಟುಂಬದವರ ಮನವಿ ಮೇರೆಗೆ ರವೀಂದ್ರನಾಥ್ ಅವರನ್ನೇ ಎಸ್‌ಪಿಪಿಯಾಗಿ ನೇಮಿಸಲಾಗಿದೆ. ಹೀಗಾಗಿ, ಕಾಮತ್‌ ಎಸ್‌ಪಿಪಿಯಾಗಿ ಮುಂದುವರಿದರೆ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಆದ್ದರಿಂದ, ಅವರ ನೇಮಕಾತಿ ರದ್ದುಪಡಿಸಬೇಕು ಆರೋಪಿ ನರೇಶ್ ಶೆಣೈ ಕೋರಿದ್ದರು.