ಸುದ್ದಿಗಳು

ಆರ್‌ಟಿಐ ಉತ್ತರಗಳು ಹೆಚ್ಚು ವಿಶ್ವಾಸಾರ್ಹವಲ್ಲ, ಆರ್‌ಟಿಐ ದಾಖಲೆಗಳನ್ನು ಉಲ್ಲೇಖಿಸಬೇಡಿ: ಸುಪ್ರೀಂ ಕೋರ್ಟ್

ಆಲಾಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ. ಸಂಜೀವ್‌ ಖನ್ನಾ ಅವರಿದ್ದ ಪೀಠವು ಆರ್‌ಟಿಐ ಕುರಿತಾದ ಅಭಿಪ್ರಾಯ ವ್ಯಕ್ತಪಡಿಸಿತು.

Bar & Bench

ಮಾಹಿತಿ ಹಕ್ಕು ಕಾಯಿದೆಯಡಿ (ಆರ್‌ಟಿಐ ಕಾಯಿದೆ) ಪಡೆಯಲಾದ ಮಾಹಿತಿಯು ವಿಶ್ವಾಸಾರ್ಹ ಎಂದು ಅವಲಂಬಿಸಬೇಕಾದ ಅವಶ್ಯಕತೆ ಇಲ್ಲ. ವಕೀಲರು ಇದನ್ನು ಅಧಿಕೃತ ಮಾಹಿತಿ ಎಂದು ಉಲ್ಲೇಖಿಸುವುದರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ (ಆಶಿಶ್‌ ಕುಮಾರ್‌ ಸಕ್ಸೇನಾ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ).

ಆಲಾಹಾಬಾದ್ ಹೈಕೋರ್ಟ್‌ನ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ. ಸಂಜೀವ್‌ ಖನ್ನಾ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಪ್ರಕರಣದ ವಿಚಾರಣೆ ವೇಳೆ ನ್ಯಾ. ಎ ಎಂ ಖಾನ್ವಿಲ್ಕರ್‌ ಅವರು, “ಆರ್‌ಟಿಐ ಉತ್ತರಗಳನ್ನು ಉಲ್ಲೇಖಿಸಬೇಡಿ. ನಮ್ಮ ಅನುಭವದ ಪ್ರಕಾರ ಅದು ಹೆಚ್ಚು ವಿಶ್ವಾಸಾರ್ಹವಲ್ಲ. ಒಂದು ವೇಳೆ ಪತ್ರವನ್ನು ಮತ್ತಾವುದೋ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದ್ದರೆ ಉತ್ತರವು ಸಂಪೂರ್ಣವಾಗಿ ಬೇರೆಯದ್ದೇ ಅಗಿರುವ ಸಾಧ್ಯತೆ ಇರುತ್ತದೆ,” ಎಂದು ಹೇಳಿದರು.

ಕಟ್ಟಡ ನೆಲಸಮ ಕಾರ್ಯಾಚಾರಣೆಗೆ ಸಂಬಂಧಿಸಿದ ಅಲಾಹಾಬಾದ್ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಪೀಠವು ನಡೆಸಿತ್ತು. ಅರ್ಜಿದಾರರು ಗೋರಖ್‌ಪುರದ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್‌ಪ್ಲ್ಯಾನ್‌ನಲ್ಲಿ ಮೊಕದ್ದಮೆಯಲ್ಲಿ ಉಲ್ಲೇಖಿತವಾಗಿರುವ ಜಾಗವನ್ನು ಜನವಸತಿ ಪ್ರದೇಶವೆಂದು ಗುರುತಿಸಿರುವುದಾಗಿ ಹೇಳಿದ್ದರು. ಆದರೆ ಇದನ್ನು ಒಪ್ಪಲು ನ್ಯಾಯಾಲಯ ಸಿದ್ಧವಿರಲಿಲ್ಲ. ಸ್ವಂತದ ಖಾಸಗಿ ಆಸ್ತಿಯಲ್ಲಿ ಮಾಡಿರುವ ನಿರ್ಮಾಣವನ್ನು ಅನಧಿಕೃತವಾಗಿ ನೆಲಸಮ ಮಾಡಿರುವ ಕೆಲಸ ಅಧಿಕಾರಿಗಳಿಂದ ನಡೆದಿರುವುದಾಗಿ ಅರ್ಜಿದಾರರು ಆರೋಪಿಸಿದ್ದರು.

ಗೋರಖ್‌ಪುರ ಅಭಿವೃದ್ಧಿ ಪ್ರಾಧಿಕಾರವು ತಮ್ಮ ಖಾಸಗಿ ಆಸ್ತಿಯಲ್ಲಿ ನೆಲಸಮ ಕಾರ್ಯಾಚರಣೆ ನಡೆಸಿದೆ. ಈ ಪ್ರಕ್ರಿಯೆಯನ್ನು ನಿಲ್ಲಿಸದೆ ಹೋದರೆ ಆರು ಕುಟುಂಬಗಳ 25 ಮಂದಿ ತಮ್ಮ ವಸತಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಮನವಿದಾರರು ಹೇಳಿದರು. ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ಆರ್‌ಟಿಐನಿಂದ ಪಡೆದಿದ್ದ ಮಾಹಿತಿಯನ್ನು ತಮ್ಮ ವಾದದ ಸಮರ್ಥನೆಗೆ ಉಲ್ಲೇಖಿಸಿದರು. ಈ ವೇಳೆ ನ್ಯಾಯಾಲಯವು “ಆರ್‌ಟಿಐ ದಾಖಲೆಗಳನ್ನು ಉಲ್ಲೇಖಿಸಬೇಡಿ,” ಎಂದು ಮತ್ತೆ ಒತ್ತಿ ಹೇಳಿತು.

ಅರ್ಜಿದಾರರನ್ನು ವಕೀಲ ಉದಯಾದಿತ್ಯ ಬ್ಯಾನರ್ಜಿ ಪ್ರತಿನಿಧಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ನಲ್ಲಿ ನಡೆಯಲಿದೆ.