ICJ and Ukraine v Russia

 

Twitter

ಸುದ್ದಿಗಳು

ಯುಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ರಷ್ಯಾ ನಿಲ್ಲಿಸಬೇಕು: ಅಂತಾರಾಷ್ಟ್ರೀಯ ನ್ಯಾಯಾಲಯದ ಮಧ್ಯಂತರ ಆದೇಶ

Bar & Bench

ಯುಕ್ರೇನ್‌ ವಿರುದ್ಧ ರಷಿಯಾವು ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ಬುಧವಾರ ಮಧ್ಯಂತರ ಆದೇಶ ನೀಡಿದೆ [ಯುಕ್ರೇನ್‌ ವರ್ಸಸ್‌ ರಷಿಯಾ ಒಕ್ಕೂಟ]. ವಿವಾದವನ್ನು ಹೆಚ್ಚಿಸುವಂತಹ ಅಥವಾ ಪರಿಹರಿಸಲು ಸಾಧ್ಯವಾಗದಂತೆ ಜಟಿಲವಾಗಿಸುವಂತಹ ಯಾವುದೇ ಕ್ರಮಗಳಿಗೆ ಮುಂದಾಗದಂತೆ ರಷ್ಯಾ ಮತ್ತು ಯುಕ್ರೇನ್‌ಗಳಿಗೆ ನ್ಯಾಯಾಲಯವು ಇದೇ ವೇಳೆ ಸೂಚಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯುವು 13:2 ಬಹುಮತದ ತೀರ್ಪಿನೊಂದಿಗೆ ಮಧ್ಯಂತರ ಆದೇಶವನ್ನು ನೀಡಿತು. ಭಾರತದ ನ್ಯಾಯಮೂರ್ತಿಯಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿರುವ ದಲ್ವೀರ್ ಭಂಡಾರಿಯವರು ಮಧ್ಯಂತರ ಆದೇಶದ ಪರವಾಗಿ ಮತ ಚಲಾಯಿಸಿದರು. ಮಧ್ಯಂತರ ಆದೇಶದ ವಿರುದ್ಧವಾಗಿ ರಷ್ಯಾ ಮತ್ತು ಚೀನಾದ ನ್ಯಾಯಮೂರ್ತಿಗಳು ಮತ ಚಲಾಯಿಸಿದರು.

ನ್ಯಾಯಾಲಯವು ತನ್ನ ಆದೇಶದಲ್ಲಿ, ರಷ್ಯಾದಿಂದ ನಿರ್ದೇಶಿತವಾದ ಅಥವಾ ಬೆಂಬಲಿತವಾದ ಯಾವುದೇ ಮಿಲಿಟರಿ ಅಥವಾ ಸಶಸ್ತ್ರ ತುಕಡಿಗಳಾಗಲಿ, ಅದೇ ರೀತಿ ರಷ್ಯಾದಿಂದ ನಿಯಂತ್ರಿತವಾದ, ನಿರ್ದೇಶಿತವಾದ, ಪ್ರಭಾವಿತವಾದ ಸಂಸ್ಥೆ ಅಥವಾ ವ್ಯಕ್ತಿಗಳಾಗಲಿ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುವಂತಹ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಸೂಚಿಸಿದೆ.

ಇದೇ ವೇಳೆ, ಮಧ್ಯಂತರ ಆದೇಶವನ್ನು ಜಾರಿಗೊಳಿಸಲು ತೆಗೆದುಕೊಳ್ಳುವ ಕ್ರಮಗಳ ಕುರಿತು ರಷ್ಯಾ ಒಕ್ಕೂಟವು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎನ್ನುವ ಯುಕ್ರೇನ್‌ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು.

ಯುಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯುವ ನಿಟ್ಟಿನಲ್ಲಿ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎನ್ನುವ ರಷ್ಯಾದ ಸಮರ್ಥನೆಯನ್ನು ನ್ಯಾಯಾಲಯ ಒಪ್ಪಲಿಲ್ಲ. ಯಾವುದೇ ರೀತಿಯ ಹತ್ಯಾಕಾಂಡಗಳನ್ನು ತಡೆಯುವ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ಪರಿಧಿಯಲ್ಲಿರಬೇಕು. ಹತ್ಯಾಕಾಂಡವನ್ನು ತಡೆಯಬಯಸುವ ಪಕ್ಷಗಳ ನಡೆ ವಿಶ್ವಸಂಸ್ಥೆಯ ತತ್ವಗಳಿಗೆ ಅನುಗುಣವಾಗಿ ಇರಬೇಕು ಎಂದು ನ್ಯಾಯಾಲಯವು ಒತ್ತಿಹೇಳಿತು.