sabarimala temple with aravna payasam  Facebook
ಸುದ್ದಿಗಳು

[ಶಬರಿಮಲೆ ಹಲಾಲ್ ಬೆಲ್ಲ ವಿವಾದ] ಹಲಾಲ್ ಅರ್ಥ ಏನೆಂದು ಅರ್ಜಿದಾರರನ್ನು ಪ್ರಶ್ನಿಸಿದ ಕೇರಳ ಹೈಕೋರ್ಟ್

"ಹಲಾಲ್ ಪರಿಕಲ್ಪನೆಯು ಕೆಲವು ವಿಷಯಗಳನ್ನು ನಿಷೇಧಿಸಲಾಗಿದೆ ಎಂದು ಮಾತ್ರ ಹೇಳುತ್ತದೆ, ಉಳಿದ ವಸ್ತುಗಳು ಹಲಾಲ್ ಆಗಿವೆ. ಈ ಪ್ರಮಾಣೀಕರಣವು ಆ ನಿಷೇಧಿತ ವಸ್ತುಗಳು ನಿರ್ದಿಷ್ಟ ಉತ್ಪನ್ನದಲ್ಲಿಲ್ಲ ಎನ್ನುತ್ತದೆ" ಎಂಬುದಾಗಿ ಪೀಠ ಹೇಳಿದೆ.

Bar & Bench

ಶಬರಿಮಲೆ ದೇವಸ್ಥಾನದಲ್ಲಿ ಹಲಾಲ್ ಪ್ರಮಾಣೀಕೃತ ಬೆಲ್ಲದ ಬಳಕೆಯ ವಿರುದ್ಧ ಹಿಂದೂ ಸಂಘಟನೆಯೊಂದು ಎತ್ತಿರುವ ಆಕ್ಷೇಪಗಳ ಬಗ್ಗೆ ಕೇರಳ ಹೈಕೋರ್ಟ್ ಬುಧವಾರ ಗೊಂದಲ ವ್ಯಕ್ತಪಡಿಸಿದೆ (ಎಸ್‌ಜೆಆರ್ ಕುಮಾರ್ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ ಮತ್ತಿತರರ ನಡುವಣ ಪ್ರಕರಣ).

ಹಲಾಲ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದು, ಆಹಾರ ಪದಾರ್ಥಗಳೂ ಸೇರಿದಂತೆ ಯಾವುದು ನ್ಯಾಯಬದ್ಧವಾದುದು ಮತ್ತು ಅನುಮತಿಸಲಾದುದು ಎನ್ನುವುದನ್ನು ಮಾತ್ರ ವ್ಯಾಖ್ಯಾನಿಸುವುದರಿಂದ, ಅರ್ಜಿದಾರರು ನಿಖರವಾಗಿ ಏನನ್ನು ವಿರೋಧಿಸುತ್ತಿದ್ದಾರೆ ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರು ಅರ್ಥಮಾಡಿಕೊಂಡಿರುವ 'ಹಲಾಲ್' ಪದದ ನಿಖರ ಅರ್ಥ ವ್ಯಾಪ್ತಿ ಕುರಿತು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

ದೇಗುಲದಲ್ಲಿ ನೈವೇದ್ಯ, ಪ್ರಸಾದ ತಯಾರಿಕೆಯಲ್ಲಿ ಹಾಳಾದ ಹಲಾಲ್‌ ಬೆಲ್ಲವನ್ನು ಬಳಸಲಾಗುತ್ತದೆ ಎಂದು ಆರೋಪಿಸಲಾದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹಲಾಲ್ ಪರಿಕಲ್ಪನೆಯು ಕೆಲವು ವಿಷಯಗಳನ್ನು ನಿಷೇಧಿಸಲಾಗಿದೆ ಎಂದು ಮಾತ್ರ ಹೇಳುತ್ತದೆ, ಉಳಿದೆಲ್ಲಾ ವಸ್ತುಗಳು ಹಲಾಲ್ ಆಗಿವೆ. ಈ ಪ್ರಮಾಣೀಕರಣವು ಆ ನಿಷೇಧಿತ ವಸ್ತುಗಳು ನಿರ್ದಿಷ್ಟ ಉತ್ಪನ್ನದಲ್ಲಿಲ್ಲ ಎಂದು ಹೇಳುತ್ತದೆ. ಇದು ಇಂಗ್ಲೆಂಡ್‌ನಂತಹ ದೇಶಗಳಲ್ಲಿದೆ. ಸುಪ್ರೀಂಕೋರ್ಟ್‌ನ ಕೆಲ ತೀರ್ಪುಗಳು ಸಹ ಅದರ ಬಗ್ಗೆ ಮಾತನಾಡುತ್ತವೆ” ಎಂದು ನರೇಂದ್ರನ್ ಮೌಖಿಕವಾಗಿ ಅಭಿಪ್ರಾಯಪಟ್ಟರು.

ಹಲಾಲ್ ಪರಿಕಲ್ಪನೆಯ ಬಗ್ಗೆ ತನ್ನ ತಿಳುವಳಿಕೆ ಏನೆಂಬುದನ್ನು ಸ್ಪಷ್ಟಪಡಿಸುವಂತೆ ಮತ್ತು ಅದರ ಬಳಕೆ ವಿರೋಧಿಸಲು ಅವರು ನೀಡುತ್ತಿರುವ ಕಾರಣಗಳೇನು ಎಂದು ತಿಳಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯವು ಪದೇ ಪದೇ ಕೇಳಿತು. ಆರ್ಜಿದಾರರು ತಮಗೆ ಈ ಪರಿಕಲ್ಪನೆಯ ಬಗ್ಗೆ ಆಳವಾದ ಜ್ಞಾನವಿಲ್ಲ ಎಂದು ಒಂದು ಹಂತದಲ್ಲಿ ಒಪ್ಪಿಕೊಂಡರು. ಆಗ ನ್ಯಾಯಾಲಯವು, “ರಿಟ್ ಅರ್ಜಿಯನ್ನು ಸಲ್ಲಿಸುವ ಮೊದಲು, ನೀವು ಪರಿಕಲ್ಪನೆಯ ಆಳಕ್ಕೆ ಹೋಗಬೇಕು" ಎಂದು ಕಿವಿಮಾತು ಹೇಳಿತು.

ಹಳತಾದ ಬೆಲ್ಲವನ್ನು ಪ್ರಸಾದಕ್ಕೆ ಬಳಸಲಾಗುತ್ತಿದೆ ಎಂದಿರುವ ಅರ್ಜಿದಾರರು ಹಲಾಲ್ ಪ್ರಮಾಣೀಕೃತ ಬೆಲ್ಲವನ್ನು ದೇವಸ್ಥಾನದಲ್ಲಿ ಬೇರೆ ಧರ್ಮದವರ ಧಾರ್ಮಿಕ ಪದ್ಧತಿಯಂತೆ ತಯಾರಿಸಿ ಅದನ್ನು ದೇವರಿಗೆ ಅರ್ಪಿಸುವುದರಿಂದ ಅನಾದಿ ಕಾಲದಿಂದಲೂ ದೇಗುಲದಲ್ಲಿ ನಡೆದುಕೊಂಡು ಬಂದ ಧಾರ್ಮಿಕ ಪದ್ಧತಿ ಮತ್ತು ಆಚರಣೆಗಳ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದ್ದರು.

ಇದೇ ವೇಳೆ ಬೆಲ್ಲ ತಯಾರಿಕೆಗೆ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಗುತ್ತಿಗೆದಾರರರನ್ನು ಕೂಡ ಪಕ್ಷಕಾರರನ್ನಾಗಿ ಮಾಡಿಕೊಂಡು ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಇದೇ ವೇಳೆ ಸೂಚಿಸಿತು. ಪ್ರಕರಣದ ವಿಚಾರಣೆ ನಾಳೆ ಮುಂದುವರೆಯಲಿದೆ.