ಶಬರಿಮಾಲಾ ಯಾತ್ರಾರ್ಥಿಗಳನ್ನು ಕರೆದೊಯ್ಯುವ ಬಸ್‌ಗಳು ಮತ್ತು ಒಪ್ಪಂದದ ಮೇರೆ ಯಾತ್ರಾರ್ಥಿಗಳನ್ನು ಕರೆದೊಯ್ಯುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಅಪಘಾತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷೆ ಮತ್ತು ಮೋಟಾರು ವಾಹನ ಕಾಯಿದೆಯ ಅನುಪಾಲನೆಗೆ ಅಗತ್ಯವಾದ ರೀತಿಯಲ್ಲಿ ಅನೇಕ ನಿರ್ದೇಶನಗಳನ್ನು ಇತ್ತೀಚೆಗೆ ಕೇರಳ ಹೈಕೋರ್ಟ್ ನೀಡಿದೆ.
ಒಪ್ಪಂದದ ಮೇರೆಗೆ ಭಕ್ತಾದಿಗಳನ್ನು ಕರೆತರುವ ವಾಹನಗಳು ರಸ್ತೆ ಸುರಕ್ಷಾ ಮಾನಂಡಗಳನ್ನು ಉಲ್ಲಂಘಿಸುತ್ತಿರುವುದು ಹಾಗೂ ಚಾಲಕರ ಗಮನಕ್ಕೆ ಭಂಗವುಂಟು ಮಾಡುವಂತಹ ನಿಗದಿತ ವಿದ್ಯುದ್ದೀಪಗಳಿಗೆ ಹೊರತಾದ ದೀಪಗಳ ಬಳಕೆ ಮೂಲಕ ಪ್ರಯಾಣಿಕರ, ಹಾದಿಹೋಕರ ಸುರಕ್ಷತೆಗೆ ಕಂಟಕಪ್ರಾಯವಾಗಿರುವುದನ್ನು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇತ್ತೀಚೆಗೆ ಗುರುತಿಸಿದೆ.
ಹಾಗಾಗಿ, ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸಾರಿಗೆ ಆಯುಕ್ತರಿಗೆ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹಾಗೂ ಇವರುಗಳ ಕೈಕೆಳಗೆ ಬರುವ ಅನೇಕ ಅಧಿಕಾರಿಗಳಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಿತು. ಈ ನಿರ್ದೇಶನಗಳಲ್ಲಿ ಪ್ರಮುಖವಾದುವೆಂದರೆ:
ವಾಹನದ ವಿಂಡ್‌ಸ್ಕ್ರೀನ್ (ಚಾಲಕನ ಮುಂದಿನ ಗಾಜಿನ ಪರದೆ) ಮತ್ತು ಹಿಂದಿನ ಗಾಜಿನ ಪರದೆ ಹಾಗೂ ಕಿಟಕಿಗಳ ಗಾಜುಗಳಿಂದ ನಿಗದಿತ ಪ್ರಮಾಣದ ಬೆಳಕು ಸರಾಗವಾಗಿ ಸಾಗುವುದನ್ನು ತಡೆಯುವ ಯಾವುದೇ ಅಡೆತಡೆಗಳನ್ನು ಒಳಗೊಳ್ಳದಂತೆ ಸುಪ್ರೀಂ ಕೋರ್ಟ್ ಈ ಹಿಂದಿನ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳಲ್ಲಿ ತಿಳಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಆಧಿಕಾರಿಗಳು ಜಾರಿಗೊಳಿಸಬೇಕು.
ಬಸ್‌ಗಳು, ಒಪ್ಪಂದದ ಮೇರೆಗೆ ಯಾತ್ರಾರ್ಥಿಗಳನ್ನು ಕರೆತರುವ ವಾಹನಗಳು ಪ್ರಯಾಣಿಕರು ಹಾಗೂ ರಸ್ತೆಹೋಕರ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಪ್ರಾಧಿಕಾರ ನಿಗದಿಪಡಿಸಿರುವುದಕ್ಕೆ ಹೊರತಾದ ವಿದ್ಯುದ್ದೀಪಗಳು, ಪ್ರತಿಫಲಕಗಳು, ಎಲ್‌ಇಡಿ, ಲೇಸರ್, ನಿಯಾನ್, ಫ್ಲ್ಯಾಶ್ ದೀಪಗಳು ಇತ್ಯಾದಿಗಳ ಬಳಕೆಯನ್ನು ಮಾಡದಂತೆ ಕ್ರಮ ಕೈಗೊಳ್ಳುವುದು.
ವಾಹನದ ಎತ್ತರ, ಗಾತ್ರ, ಉದ್ದ ಹಾಗೂ ಜಾಮಿತೀಯ ದೃಷ್ಟಿಗೋಚರವಾಗುವಂತೆ ನಿಗದಿಪಡಿಸಲಾಗದ ವಿದ್ಯುದ್ದೀಪ ಸಂಕೇತಗಳನ್ನು ನಿರ್ವಹಣೆ ಮಾಡದೆ ಇರುವುದರ ವಿರುದ್ಧ ಕ್ರಮ ಕೈಗೊಳ್ಳುವುದು.
ಅತಿ ಹೆಚ್ಚು ಶಬ್ಧವನ್ನು ಹೊಮ್ಮಿಸುವಂತಹ ಧ್ವನಿವರ್ಧಕಗಳ ಬಳಕೆ ಮಾಡುವ ಮೂಲಕ ಚಾಲಕನಿಗೆ ಹೊರಗಿನ ಶಬ್ದ ಕೇಳದಂತೆ ಹಾಗೂ ಇತರೆ ದಾರಿಹೋಕರ ಗಮನಭಂಗವಾಗುವಂತೆ ಮಾಡುವುದರ ವಿರುದ್ಧ ಕ್ರಮವಹಿಸುವುದು.
ನಿರಂತರವಾಗಿ ಮಿಣುಕುವಂತಹ ಡಿಜೆ ರೊಟೇಟಿಂಗ್ ಎಲ್‌ಇಡಿ ದೀಪಗಳು, ವಿವಿಧ ಬಣ್ಣಗಳ ಎಲ್‌ಇಡಿ, ಲೇಸರ್, ನಿಯಾನ್ ದೀಪಗಳನ್ನು ಪ್ರಯಾಣಿಕರ ವಿಭಾಗದಲ್ಲಿ ಬಳಸುವುದು, ಪ್ರಯಾಣಿಕರ ವಿಭಾಗವನ್ನು ಡ್ಯಾನ್ಸ್ ಫ್ಲೋರ್ ಮಾದರಿಯಲ್ಲಿ ಬಳಸುವ ರೀತಿಯಲ್ಲಿ ದೀಪಗಳ ವಿನ್ಯಾಸ ಮಾಡುವುದು, ಆ ಮೂಲಕ ಚಾಲಕ ಹಾಗೂ ಇತರೆ ರಸ್ತೆಹೋಕರ ಗಮನಕ್ಕೆ ಕಾರಣವಾಗುವುದನ್ನು ನಿರ್ಬಂಧಿಸುವುದು.
ಡ್ರೈವರ್ ಕ್ಯಾಬಿನ್‌ನಲ್ಲಿ ವಿವಿಧ ಬಣ್ಣದ ದೀಪಗಳನ್ನು ಬಳಸುವ ಮೂಲಕ ಚಾಲಕನ ಮುಂದಿನ ವಿಂಡ್‌ಸ್ಕ್ರೀನ್‌ನಲ್ಲಿ ಬೆಳಕಿನ ಪ್ರತಿಫಲನ, ಮಬ್ಬಾಗುವಿಕೆಗೆ ಕಾರಣವಾಗುವುದು. ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೊಡ್ಡುವುದರ ವಿರುದ್ಧ ಕ್ರಮ ಕೈಗೊಳ್ಳುವುದು.
ಹೆಚ್ಚು ಶಬ್ಧದ ಧ್ವನಿವರ್ಧಕಗಳ ಬಳಕೆಗಾಗಿ ಎಸಿ ಮತ್ತು ಡಿಸಿ ವಿದ್ಯುತ್ ಅನ್ನು ಮಿಳಿತಗೊಳಿಸುವ ಮೂಲಕ ಬೆಂಕಿ ಅನಾಹುತಗಳ ಅಪಾಯಗಳಿಗೆ ಆಹ್ವಾನವೀಯುವುದು. ದೊಡ್ಡ ಗಾತ್ರದ ಸ್ಟಿಕರಿಂಗ್‌ಗಳ, ಟಿಂಟ್ ಫಿಲ್ಮ್, ಕರ್ಟನ್‌ಗಳನ್ನು ಬಳಸುವ ಮೂಲಕ ಬೆಳಕು ಸಾಗಿಬರುವುದನ್ನು ಅಡ್ಡಿಪಡಿಸಿ ಚಾಲಕನಿಗೆ ರಸ್ತೆ ಸಮರ್ಪಕವಾಗಿ ಕಾಣದಿರುವುದಕ್ಕೆ ಕಾರಣವಾಗುವುದನ್ನು ತಡೆಯುವುದು.
ಚಾಲಕನ ಕ್ಯಾಬಿನ್‌ನಲ್ಲಿ ವಿವಿಧ ರೀತಿಯ ನೇತಾಡುವ ವಸ್ತುಗಳನ್ನು ಇರಿಸುವುದರಿಂದ ನೋಟಕ್ಕೆ ಅಡ್ಡಿಯಾಗುವಂತೆ ಮಾಡುವುದು ಮುಂತಾದವುಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದು.
ನಿಗದಿತ ಹಾರ್ನ್‌ಗಳನ್ನಲ್ಲದೆ ಕರ್ಕಶ, ದೀರ್ಘ ಶಬ್ದಗಳನ್ನು, ಕೀರಲು, ಶಿಳ್ಳೆಯಂತಹ ಶಬ್ದಗಳ ಹಾರ್ನ್‌ಗಳ ಬಳಸದಂತೆ ನಿಯಂತ್ರಿಸುವುದು.
ಇಂತಹ ಹಲವು ಪ್ರಮುಖ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ.