Kerala High Court 
ಸುದ್ದಿಗಳು

ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರ್ಪಡೆ: ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಒತ್ತಾಯ

ತನ್ನ ಸಹೋದರನಿಂದಲೇ ಗರ್ಭ ಧರಿಸಿದ್ದ ಅಪ್ರಾಪ್ತ ಮಗಳ ಗರ್ಭಪಾತಕ್ಕೆ ಅನುಮತಿಸುವಂತೆ ಕೋರಿ ತಂದೆಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಪೀಠ ಪೋಷಕರಿಗೆ ಉಂಟಾಗುವ ಮುಜುಗರ ತಪ್ಪಿಸಲು ಸುರಕ್ಷಿತ ಲೈಂಗಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದಿತು.

Bar & Bench

ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಸುರಕ್ಷಿತ ಲೈಂಗಿಕ ಶಿಕ್ಷಣ ಸೇರ್ಪಡೆ ಮಾಡುವ ಅಗತ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ತನ್ನ ಸಹೋದರನಿಂದಲೇ ಗರ್ಭ ಧರಿಸಿದ ಅಪ್ರಾಪ್ತ ಮಗಳ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಲೇವಾರಿ ಮಾಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪೋಷಕರಿಗೆ ಉಂಟಾಗುವ ಮುಜುಗರ ತಪ್ಪಿಸಲು ಸುರಕ್ಷಿತ ಲೈಂಗಿಕ ಶಿಕ್ಷಣ ನೀಡುವುದು ಇಂದಿನ ಅಗತ್ಯ ಎಂದು  ಎಂದು ನ್ಯಾ. ಪಿ ವಿ ಕುಂಞಿಕೃಷ್ಣನ್ ಒತ್ತಿ ಹೇಳಿದರು.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಯಾರೂ ಪೋಷಕರನ್ನು ದೂಷಿಸುವಂತಿಲ್ಲ. ಇದಕ್ಕೆ ಸಮಾಜದ ಭಾಗವಾದ ಜನರೇ ಹೊಣೆಗಾರರು.

  • ತನ್ನ ಸದಸ್ಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸದ ಕುಟುಂಬ ವ್ಯವಸ್ಥೆಯಲ್ಲಿ ಒಡಹುಟ್ಟಿದವರ ಸಂಭೋಗ ಕ್ರಿಯೆ ನಡೆಯಬಹುದು. ಅಷ್ಟೇ ಅಲ್ಲದೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿಯೂ ಇದು ಸಂಭವಿಸಬಹುದು.

  • ಶಾಲಾ-ಕಾಲೇಜುಗಳಲ್ಲಿ ಸೂಕ್ತ ‘ಲೈಂಗಿಕ ಶಿಕ್ಷಣ’ದ ಅಗತ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು

  • ಸಮಾಜಕ್ಕೆ ಉತ್ತಮ ಕೌಟುಂಬಿಕ ವಾತಾವರಣ ಅಗತ್ಯ. ಇದನ್ನು ಸಾಧಿಸಲು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಇಂತಹ ದುರದೃಷ್ಟದ ಜನರ ಮೇಲೆ ಕಲ್ಲೆಸೆಯದೆ ಒಂದಾಗಬೇಕು.

  • ಅಗತ್ಯವಿದ್ದರೆ ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ‘ಸುರಕ್ಷಿತ ಲೈಂಗಿಕ ಶಿಕ್ಷಣ ಸೇರ್ಪಡೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಸಮಿತಿ ರಚನೆಯಾಗಬೇಕು.

  • ಅಪ್ರಾಪ್ತ ಮಕ್ಕಳು ಅಂತರ್ಜಾಲ, ಗೂಗಲ್‌ ಸರ್ಚ್‌ ಬಳಸುತ್ತಿದ್ದು ಮಕ್ಕಳಿಗೆ ಯಾವುದೇ ಮಾರ್ಗದರ್ಶನ ದೊರೆಯುತ್ತಿಲ್ಲ.

  • ಅಗತ್ಯ ಕ್ರಮ ಕೈಗೊಳ್ಳಲು ಅನುವಾಗುವಂತೆ ಆದೇಶದ ಪ್ರತಿಯನ್ನು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಲುಪಿಸತಕ್ಕದ್ದು.

ಈ ಹಿಂದೆ ಅಪ್ರಾಪ್ತ ಬಾಲಕಿಯ ಏಳು ತಿಂಗಳ ಗರ್ಭಾವಸ್ಥೆ ಅಂತ್ಯಗೊಳಿಸುವಂತೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೂ ಮಗುವಿಗೆ ಅಪ್ರಾಪ್ತೆ ಜನ್ಮ ನೀಡಿದ್ದಾಳೆ ಎಂದು ನಂತರ ತಿಳಿದು ಬಂದ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯಿದೆಗೆ ಅನುಗುಣವಾಗಿ ನವಜಾತ ಶಿಶುವಿನ ಪಾಲನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ಮಕ್ಕಳ ಕಲ್ಯಾಣ ಸಮಿತಿಗೆ ಸೂಚಿಸಿತು.

ನವಜಾತ ಶಿಶುವನ್ನು ತಾನು ನೋಡಿಕೊಳ್ಳುತ್ತಿದ್ದು ಅಪ್ರಾಪ್ತ ಬಾಲಕಿಯನ್ನು ಆಕೆಯ ಚಿಕ್ಕಪ್ಪನ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಹೆಚ್ಚಿನ ಆದೇಶ ನೀಡುವ ಅಗತ್ಯವಿಲ್ಲ ಎಂದ ನ್ಯಾಯಾಲಯ ಪ್ರಕರಣ ವಿಲೇವಾರಿ ಮಾಡಿದೆ. ಆದರೆ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅದು ಇದೇ ವೇಳೆ ನುಡಿದಿದೆ. ಇದೇ ವೇಳೆ ನವಜಾತ ಶಿಶುವಿನ ರಕ್ಷಣೆಯು ಸರ್ಕಾರದ ಹೊಣೆ ಎಂದಿದೆ.