ಕೆಲ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು (ಭಾಗ್ವಾ) ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿತು. ಆದರೆ ಈ ಮಧ್ಯಂತರ ಆದೇಶ ಮೂಲಭೂತ ಸ್ವಾತಂತ್ರ್ಯವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂಬುದು ಕೆಲವರ ವಾದ.
ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿದ್ದು ವಿವಾದ ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ. ಈ ನಡುವೆ ವಿವಾದವನ್ನು ಕಾನೂನಿನ ದೃಷ್ಟಿಯಲ್ಲಿ ನೋಡಲು ಯತ್ನಿಸಿದ ತಜ್ಞರನ್ನು ʼಬಾರ್ ಅಂಡ್ ಬೆಂಚ್ʼ ಮಾತನಾಡಿಸಿತು. ಅದರ ವಿವರ ಇಲ್ಲಿದೆ:
ಮೂಲಭೂತ ಹಕ್ಕುಗಳ ಘೋರ ಉಲ್ಲಂಘನೆಯಾಗಿರುವುದರಿಂದ ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಇದು ಮಹಿಳೆಯರು ತಮ್ಮ ಸ್ವಂತ ವಸ್ತ್ರ ಸಂಹಿತೆಯನ್ನು ಆಯ್ಕೆ ಮಾಡುವ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ. ಕೊನೆಯದಾಗಿ, ಬಹುತೇಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ತಡೆಯುತ್ತದೆ.ಮೀನಾಕ್ಷಿ ಅರೋರ, ಹಿರಿಯ ನ್ಯಾಯವಾದಿ
ಮಧ್ಯಂತರ ಹಂತದಲ್ಲಿ, ಕಳೆದ ವರ್ಷಾಂತ್ಯದವರೆಗೆ ಇದ್ದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು (ಆದೇಶವು) ನಿಯಮ ಪಾಲನೆ ಪರವಾಗಿದೆ. ಇದು ಸಹಜವಾಗಿಯೇ ನಿಯಮದ ಸಾಂವಿಧಾನಿಕತೆಯ ಮೇಲೆ ಹೈಕೋರ್ಟ್ ಏನನ್ನು ಹೇಳಲಿದೆ ಎಂಬುದರ ಪ್ರತಿಬಿಂಬವಲ್ಲ.ಜೆ ಸಾಯಿ ದೀಪಕ್, ನ್ಯಾಯವಾದಿ
ಇದು ಧಾರ್ಮಿಕ ಉಡುಪುಗಳ ನಡುವಿನ ಪೈಪೋಟಿಯಲ್ಲ. ಹಿಜಾಬ್ ಅಥವಾ ತಲೆವಸ್ತ್ರದ ಜೊತೆಗೆ ಕೇಸರಿ ಶಾಲುಗಳ ಬಳಕೆಯನ್ನು ಅವರು ಬೆಸೆದಿರುವುದು ತಪ್ಪು ಅಸಮಾನತೆಯಾಗಿದೆ. ಸಾರ್ವಜನಿಕವಾಗಿ ಲಭ್ಯವಿರುವ ವೀಡಿಯೋಗಳ ಪ್ರಕಾರತ ಹಿಜಾಬ್ ಧರಿಸಿರುವ ಯುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ, ಬಹುಸಂಖ್ಯಾತ ದಬ್ಬಾಳಿಕೆಯ (Bullying) ಸಂಕೇತವಾಗಿ ಕೇಸರಿ ಶಾಲುಗಳನ್ನು ಧರಿಸಿರುವ ಯುವ ವಿದ್ಯಾರ್ಥಿಗಳ ಗುಂಪು ಆಕ್ರಮಣ ನಡೆಸುತ್ತಿರುವುದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅವರು ಪ್ರವೇಶಿಸುವುದಕ್ಕೆ ಅಡ್ಡಿಪಡಿಸುತ್ತದೆ.ವೃಂದಾ ಗ್ರೋವರ್, ವಕೀಲೆ
ದೃಢೀಕರಣ ಪರೀಕ್ಷೆ ಯಾವಾಗಲೂ ಅಗತ್ಯ ಪರೀಕ್ಷೆಗಿಂತ ಉತ್ತಮ. ತಮ್ಮ ಧಾರ್ಮಿಕ ಆಚರಣೆಯಾಗಿ ವ್ಯಕ್ತಿಗಳು ಭಾವಿಸುವುದನ್ನು ಪ್ರತಿಪಾದಿಸುವ ಹಕ್ಕನ್ನು ಧಾರ್ಮಿಕ ಹಕ್ಕು ಒದಗಿಸುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ಹೇಳುತ್ತದೆ. ಉಡುಗೆ ನಿಜವಾಗಿಯೂ ವಾಕ್ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ಭಾಗವಾಗಿದೆ. ಮನಸೋಇಚ್ಛೆಯ ನಿಯಮಗಳನ್ನು ಮಾಡುವ ಹಕ್ಕು ಸರ್ಕಾರಕ್ಕೆ ಇಲ್ಲ.ಪ್ರೊ. ಫೈಜಾನ್ ಮುಸ್ತಫಾ, ಎನ್ಎಎಲ್ಎಸ್ಎಆರ್, ಹೈದರಾಬಾದ್
ಈ ಪ್ರಕರಣವನ್ನು ನಿರ್ಧರಿಸುವಾಗ, ಹಿಜಾಬ್ ಧರಿಸುವುದು ಸಮುದಾಯದ ಸದಸ್ಯರ "ಅಗತ್ಯ ಧಾರ್ಮಿಕ ಆಚರಣೆ" ಎಂಬ ತೀರ್ಮಾನಕ್ಕೆ ಹೈಕೋರ್ಟ್ ಬರಬೇಕಾಗುತ್ತದೆ. ಸರ್ಕಾರ ಸಂಯಮ ಪಾಲಿಸಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಯತ್ನಿಸಬೇಕು, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಆಚರಣೆ ಆಧಾರದ ಮೇಲೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.ಸಿದ್ಧಾರ್ಥ ದವೆ, ಹಿರಿಯ ನ್ಯಾಯವಾದಿ
ತರಗತಿಯೊಳಗೆ ಹಿಜಾಬ್ ಧರಿಸಬೇಕು ಎಂಬ ಬೇಡಿಕೆ ಇತ್ತೀಚಿನದ್ದು ಎಂಬುದು ಬೆಳಕಿಗೆ ಬಂದಿದೆ, ಅದೇ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೂ ಹಿಜಾಬ್ ಧರಿಸದೇ ತರಗತಿಗಳಿಗೆ ಹಾಜರಾಗುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ, ಅನುಕೂಲತೆಯ ಸಮತೋಲನದ ವಾದವನ್ನು ಸಹ ಮನವರಿಕೆಯಾಗುವಂತೆ ಮಾಡಲಾಗಿಲ್ಲ. ಶಾಸನಬದ್ಧ ಆದೇಶದ ಮೇಲೆ ತಡೆ ನೀಡುವುದು ಅತ್ಯಂತ ಅಪರೂಪ ಮತ್ತು ಅದು ಮೇಲ್ನೋಟಕ್ಕೆ ಮೂಲಭೂತ, ಸಾಂವಿಧಾನಿಕ ಅಥವಾ ಶಾಸನಬದ್ಧ ಹಕ್ಕುಗಳನ್ನು ಉಲ್ಲಂಘಿಸಬೇಕಾಗುತ್ತದೆ.ನಿಖಿಲ್ ಮೆಹ್ರಾ, ವಕೀಲ
ಪ್ರಸ್ತುತ ಹಿಜಾಬ್ ವಿವಾದ ಭವಿಷ್ಯದ ಪೀಳಿಗೆಯ ಮನಸ್ಸಗಳನ್ನು ಭ್ರಷ್ಟಗೊಳಿಸಲು ಯತ್ನಿಸುತ್ತಿರುವ ಮಹತ್ವವಲ್ಲದ ವಿಚಾರ. ಭಾರತದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಮಹಿಳೆಯರು ಶತಮಾನಗಳಿಂದಲೂ ಹಿಜಾಬ್ ಧರಿಸುತ್ತ ಅದನ್ನು ಪಾಲಿಸುತಾ ಬಂದಿದ್ದಾರೆ. ಇದು ಮಹಿಳೆಯ ಗೌರವವನ್ನು ರಕ್ಷಿಸುತ್ತದೆ.ಅಮೀನ್ ಸೋಲ್ಕರ್, ನ್ಯಾಯವಾದಿ
ವ್ಯಕ್ತಿ ಧಾರ್ಮಿಕ ಸಂಕೇತಗಳನ್ನು ಧರಿಸುವುದು ಕಾನೂನಿನ ಅಡಿಯಲ್ಲಿ ಯಾವುದೇ ಅಪರಾಧವಲ್ಲ. ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ರಾಜ್ಯದ ಸಾಧನಗಳಾಗಿರುವುದರಿಂದ, ಅವು ಸ್ವತಃ ಕಾನೂನಿನ ನಿಯಮಕ್ಕೆ ಒಳಪಟ್ಟಿರುತ್ತವೆ ಮತ್ತು ಈ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯ ಅಥವಾ ಆದ್ಯತೆಯನ್ನು ಚಲಾಯಿಸುವ ಹಕ್ಕು ಇರುವುದಿಲ್ಲ. ಅವು ಹಾಗೆ ಮಾಡಿದರೆ, ಕಾನೂನನ್ನು ಉಲ್ಲಂಘಿಸಿದಂತೆ.ಅಂಜನಾ ಪ್ರಕಾಶ್, ಹಿರಿಯ ನ್ಯಾಯವಾದಿ