ಮುಕುಲ್ ರೋಹಟ್ಗಿ, ಸುಪ್ರೀಂ ಕೋರ್ಟ್ ಮತ್ತು ಎಲ್‌ಜಿಬಿಟಿಕ್ಯೂಐಎ
ಮುಕುಲ್ ರೋಹಟ್ಗಿ, ಸುಪ್ರೀಂ ಕೋರ್ಟ್ ಮತ್ತು ಎಲ್‌ಜಿಬಿಟಿಕ್ಯೂಐಎ 
ಸುದ್ದಿಗಳು

ಸಲಿಂಗ ವಿವಾಹ: ಸುಪ್ರೀಂ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಮುಕುಲ್‌ ರೋಹಟ್ಗಿ

Bar & Bench

ಸಲಿಂಗ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸುವಂತೆ ಕೋರಿ ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿಗುರುವಾರ ಸುಪ್ರೀಂ ಕೋರ್ಟ್ ಎದುರು ತುರ್ತು ಪ್ರಸ್ತಾಪ ಮಾಡಿದ್ದಾರೆ.

ಸಲಿಂಗ ವ್ಯಕ್ತಿಗಳ ವಿವಾಹದ ಹಕ್ಕನ್ನು ನಿರಾಕರಿಸುವುದು ಅಂತಹ ವ್ಯಕ್ತಿಗಳ ವಿರುದ್ಧ ಎಸಗುವ ತಾರತಮ್ಯಕ್ಕೆ ಸಮ ಎಂದು ನ್ಯಾಯಪೀಠದ ಎಲ್ಲಾ ನ್ಯಾಯಮೂರ್ತಿಗಳು ಒಪ್ಪಿಕೊಂಡಿದ್ದರೂ ತೀರ್ಪನ್ನು ನೀಡಿದ ಸಾಂವಿಧಾನಿಕ ಪೀಠ ಪರಿಹಾರ ನಿರಾಕರಿಸಿದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಬೇಕು ಎಂದು ರೋಹಟ್ಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವನ್ನು ಕೋರಿದರು.

"ತಾರತಮ್ಯವಿದೆ ಎಂದು ಎಲ್ಲಾ ನ್ಯಾಯಮೂರ್ತಿಗಳು ಒಪ್ಪುತ್ತಾರೆ... ತಾರತಮ್ಯವಿದ್ದರೆ ಅದಕ್ಕೆ ಪರಿಹಾರ ಇರಬೇಕು. ಹೆಚ್ಚಿನ ಸಂಖ್ಯೆಯ ಜನರ ಜೀವನ (ತೀರ್ಪಿನ ಮೇಲೆ) ಅವಲಂಬಿತವಾಗಿದೆ. ನಾವು ಮುಕ್ತ ನ್ಯಾಯಾಲಯದ ವಿಚಾರಣೆಗೆ ಒತ್ತಾಯಿಸಿದ್ದೇವೆ. ನವೆಂಬರ್ 28ರಂದು ಪ್ರಕರಣದ ವಿಚಾರಣೆ ನಡೆಸಬೇಕು. ನಾವು ಮುಕ್ತ ನ್ಯಾಯಾಲಯದ ವಿಚಾರಣೆ ಕೋರುತ್ತಿದ್ದೇವೆ" ಎಂದು ಅವರು ಹೇಳಿದರು. ಆಗ ಮನವಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಜೆಐ ಚಂದ್ರಚೂಡ್ ತಿಳಿಸಿದರು.

ಮರುಪರಿಶೀಲನಾ ಅರ್ಜಿಗಳನ್ನು ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯ ಮುಕ್ತ ನ್ಯಾಯಾಲಯದಲ್ಲಿ ಆಲಿಸದೆ ಇನ್‌ ಚೇಂಬರ್‌ನಲ್ಲಿ ಆಲಿಸುತ್ತದೆ. ವಕೀಲರು ಯಾವುದೇ ಮೌಖಿಕ ವಾದಗಳನ್ನು ಮಾಡುವುದಿಲ್ಲ. ಆದರೂ ಅಸಾಧಾರಣ ಪ್ರಕರಣಗಳಲ್ಲಿ ಮತ್ತು ಮರಣದಂಡನೆಗೆ ಸಂಬಂಧಿಸಿದ ವಿಷಯಗಳಲ್ಲಿ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಲಾಗುತ್ತದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್‌ ರವೀಂದ್ರ ಭಟ್,  ಹಿಮಾ ಕೊಹ್ಲಿ ಹಾಗೂ ಪಿ ಎಸ್‌ ನರಸಿಂಹ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಅಕ್ಟೋಬರ್ 17ರಂದು ತೀರ್ಪಿತ್ತಿತ್ತು. ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಹೇಳಿತ್ತು.