Sameer Wankhede with Bombay High Court 
ಸುದ್ದಿಗಳು

ವಾಂಖೆಡೆ ಬಂಧಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಲು ಏಕೆ ಹಿಂಜರಿಯುತ್ತಿದ್ದೀರಿ? ಸಿಬಿಐಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ನಟ ಶಾರುಖ್ ಖಾನ್ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವಾಂಖೆಡೆ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರನ್ನು ಬಂಧಿಸುವ ಉದ್ದೇಶ ಇದೆಯೇ ಎಂಬ ಪ್ರಶ್ನೆಗೆ ಸಿಬಿಐ ಸ್ಪಷ್ಟವಾಗಿ ಉತ್ತರಿಸಲು ನಿರಾಕರಿಸಿದಾಗ ನ್ಯಾಯಾಲಯ ಅಸಮಾಧಾನಗೊಂಡಿತು.

Bar & Bench

ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ದಾಖಲಾಗಿರುವ ಲಂಚ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುವುದೇ ಎಂಬ ನ್ಯಾಯಾಲಯದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಸಿಬಿಐ ವಿಫಲವಾಗಿರುವ ಬಗ್ಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ವರ್ಷ ಮೇ 19ರಂದು ವಾಂಖೆಡೆ ಪರವಾಗಿ ನೀಡಲಾದ ಮಧ್ಯಂತರ ರಕ್ಷಣಾ ಆದೇಶವನ್ನು ತೆರವು ಮಾಡುವಂತೆ ಸಂಸ್ಥೆ ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್‌ ಜಿ ದಿಗೆ ಅವರಿದ್ದ ವಿಭಾಗೀಯ ಪೀಠ ಆಲಿಸುತ್ತಿತ್ತು.

ಈ ಅಂಶದ ಕುರಿತು ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಲು ಸಿಬಿಐ ವಕೀಲರು ಸ್ಪಷ್ಟವಾಗಿ ಹಿಂಜರಿದಿದ್ದರಿಂದ ಪೀಠ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.

"ನೀವೊಂದು ಪ್ರಮುಖ ತನಿಖಾ ಸಂಸ್ಥೆ. ನೀವು ಯಾಕೆ ಕಣ್ಣಾಮುಚ್ಚಾಲೆ ಆಡುತ್ತಿದ್ದೀರಿ? ನೀವು ಅವರನ್ನು (ಸಮೀರ್‌) ಬಂಧಿಸಲು ಬಯಸುತ್ತೀರೋ ಇಲ್ಲವೋ ಎಂದು ಹೇಳಲು ಏಕೆ ಹಿಂಜರಿಯುತ್ತಿದ್ದೀರಿ?" ಎಂದು ನ್ಯಾಯಾಲಯ ಕೇಳಿತು.

ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಿರುವುದರಿಂದ ವಾಂಖೆಡೆ ಅವರನ್ನು ಬಂಧಿಸುವ ಪ್ರಶ್ನೆಯೇ ಇಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.

ನಂತರ ವಾಂಖೆಡೆ ಅವರನ್ನು ಬಂಧಿಸುವ ಉದ್ದೇಶವನ್ನು ಹೊಂದಿದೆಯೇ ಎಂದು ತಿಳಿಸುವಂತೆ ಅದು ಸಿಬಿಐಯನ್ನು ಕೇಳಿತು. ಸಿಬಿಐ ಬಂಧಿಸಲು ಉದ್ದೇಶಿಸಿದ್ದರೆ, 48 ಗಂಟೆಗಳ ಅವಧಿಯ ನೋಟಿಸ್ ನೀಡಬಹುದು” ಎಂದು ಅದು ಹೇಳಿತು.