Madras High Court 
ಸುದ್ದಿಗಳು

"ಸನಾತನ ಧರ್ಮ ಎಂಬುದು ದೇಶ, ಪೋಷಕರೆಡೆಗಿನ ಕರ್ತವ್ಯಗಳ ಮೊತ್ತ; ಅದನ್ನೇಕೆ ನಾಶಪಡಿಸಬೇಕು?" ಮದ್ರಾಸ್ ಹೈಕೋರ್ಟ್ ಪ್ರಶ್ನೆ

Bar & Bench

ಹಿಂದೂ ಜೀವನ ಪದ್ದತಿ ಪಾಲಿಸುವವರಿಗೆ ಸನಾತನ ಧರ್ಮ ಎಂಬುದು ಚಿರಂತನ ಕರ್ತವ್ಯಗಳಾಗಿದ್ದು, ದೇಶ, ಪೋಷಕರು, ಗುರುಗಳ ಬಗೆಗಿನ ಕರ್ತವ್ಯಗಳ ಒಟ್ಟು ಮೊತ್ತವಾಗಿದೆ. ಅಂತಹ ಕರ್ತವ್ಯಗಳನ್ನು ಏಕೆ ನಾಶಪಡಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಗುರುವಾರ ಹೇಳಿದೆ.

ತಮಿಳುನಾಡು ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಬೆನ್ನಲ್ಲೇ ಸನಾತನ ಧರ್ಮದ ಕುರಿತು ನಡೆಯುತ್ತಿರುವ ವ್ಯಾಪಕ ಚರ್ಚೆಯ ನಡುವೆ ಮದ್ರಾಸ್‌ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಮಗೆ ಸನಾತನ ಧರ್ಮದ ಸುತ್ತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅರಿವಿದ್ದು ಅದರ ಬಗ್ಗೆ ಚಿಂತಿಸದೇ ಇರಲು ಸಾಧ್ಯವಿಲ್ಲ ಎಂದು ನ್ಯಾ. ಎನ್‌ ಶೇಷಸಾಯಿ ತಿಳಿಸಿದರು.

ಸನಾತನ ಧರ್ಮ ಜೀವನ ವಿಧಾನವಾಗಬೇಕೆಂಬ ಆಶಯ ಹೊಂದಿದ್ದರೂ ಎಲ್ಲೋ ಒಂದೆಡೆ ಕೇವಲ ಜಾತಿ ಮತ್ತು ಅಸ್ಪೃಶ್ಯತೆ ಪ್ರಚಾರ ಮಾಡುವುದಕ್ಕಾಗಿ ಅದು ಇದೆ ಎಂಬ ಕಲ್ಪನೆ ಹರಡಿಕೊಂಡಿತು. ಸನಾತನ ಧರ್ಮದ ತತ್ವದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇದ್ದರೆ ಅದನ್ನು ಸಹಿಸಲಾಗದು. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿರುವುದರಿಂದ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ನುಡಿಯಿತು.  

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಸಂಸ್ಥಾಪಕ ಸಿ ಎನ್‌ ಅಣ್ಣಾದೊರೈ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ʼಸನಾತನಕ್ಕೆ ವಿರೋಧʼ ಎಂಬ ವಿಚಾರವಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಸ್ಥಳೀಯ ಸರ್ಕಾರಿ ಕಲಾ ಕಾಲೇಜು ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಇಳಂಗೋವನ್ ಎಂಬವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ಹಂಚಿಕೊಂಡಿತು.

ಕಾಲೇಜು ಈಗಾಗಲೇ ಸುತ್ತೋಲೆ ಹಿಂಪಡೆದಿದೆ ಎಂಬ ವಿಚಾರ ಗಮನಿಸಿದ ನ್ಯಾಯಾಲಯ ಮನವಿಯನ್ನು ವಿಲೇವಾರಿ ಮಾಡಿತು. ಸಂವಿಧಾನ ರಚನಾಕಾರರು ಪ್ರಜ್ಞಾಪೂರ್ವಕವಾಗಿ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಆತ್ಯಂತಿಕ ಹಕ್ಕನ್ನಾಗಿ ಮಾಡಿಲ್ಲ ಆಯ್ಕೆಯ ಹಕ್ಕನ್ನಾಗಿ ಮಾಡಿದ್ದಾರೆ ಎಂದು ಕೂಡ ಅದು ಸೆಪ್ಟೆಂಬರ್ 15ರಂದು ನೀಡಿದ ಆದೇಶದಲ್ಲಿ ತಿಳಿಸಿತು.