ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಟಿಎಂಸಿ ಮುಖಂಡ ಶಹಜಹಾನ್ ಶೇಖ್ ಸಂದೇಶ್‌ಖಾಲಿಯ ಜಿಲ್ಲಾ ಪರಿಷತ್ ಮುಖ್ಯಸ್ಥರಾಗಿ ಮುಂದುವರಿಯುವುದಕ್ಕೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಆಕ್ಷೇಪಿಸಿದೆ.
ಮುಂದಿನ ವಿಚಾರಣೆಯವರೆಗೆ ಶಹಜಹಾನ್ ಜಿಲ್ಲಾ ಪರಿಷತ್ ಮುಖ್ಯಸ್ಥರಾಗಿ ಯಾವುದೇ ಅಧಿಕಾರ ಚಲಾಯಿಸದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಶೇಖ್ ಪರ ವಕೀಲ ಸಬ್ಯಸಾಚಿ ಬ್ಯಾನರ್ಜಿ ಅವರಿಗೆ ಸೂಚಿಸಿದೆ.
ಶಹಜಹಾನ್ ಅವರನ್ನು ಟಿಎಂಸಿ ಅಮಾನತುಗೊಳಿಸಿದೆ ಎಂದು ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ (ಎಜಿ) ಕಿಶೋರ್ ದತ್ತಾ ಅವರನ್ನು ಉದ್ದೇಶಿಸಿ ಪೀಠ, "ಶಹಜಹಾನ್ ಶೇಖ್ ಜಿಲ್ಲಾ ಪರಿಷತ್ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯಬೇಕೇ?" ಎಂಬುದಾಗಿ ಕೇಳಿತು.
ಈ ಹಂತದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅಶೋಕ್ ಕೆ ಆರ್ ಚಕ್ರವರ್ತಿ ಅವರು "ಶೇಖ್ ಇನ್ನೂ ರಾಜ್ಯ ಸಂಪುಟ ಸಚಿವರ ಸ್ಥಾನಮಾನ ಹೊಂದಿರುವುದರಿಂದ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಇಲ್ಲವೇ (ಜಿಲ್ಲಾ ಪರಿಷತ್) ಪ್ರಧಾನ್ ಸ್ಥಾನದಿಂದ ತೆಗೆದುಹಾಕಬೇಕು ಎಂದು ಪೀಠಕ್ಕೆ ಕೋರಿದರು.
ಅವರನ್ನು ಹುದ್ದೆಯಿಂದ ತೆಗೆದುಹಾಕಲು, ಕಾನೂನಿನಲ್ಲಿ ಸೂಚಿಸಿರುವಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ ಎಂದು ಎಜಿ ದತ್ತಾ ಹೇಳಿದರು.
ಆದರೆ ಇದನ್ನು ಒಪ್ಪದ ನ್ಯಾಯಾಲಯ ಅವರು ಪ್ರಧಾನ್ ಹುದ್ದೆಯ ಯಾವುದೇ ಅಧಿಕಾರ ಚಲಾಯಿಸಲು ಸದ್ಯಕ್ಕೆ ಅವಕಾಶ ನೀಡುವಂತಿಲ್ಲ ಎಂದು ತಿಳಿಸಿತು.
ಮುಂದಿನ ವಿಚಾರಣೆಯವರೆಗೆ ಶಹಜಹಾನ್ ಜಿಲ್ಲಾ ಪರಿಷತ್ ಮುಖ್ಯಸ್ಥರಾಗಿ ಯಾವುದೇ ಅಧಿಕಾರ ಚಲಾಯಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಶೇಖ್ ಪರ ವಕೀಲ ಸಬ್ಯಸಾಚಿ ಬ್ಯಾನರ್ಜಿ ಅವರಿಗೆ ಇದೇ ವೇಳೆ ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವಿಚಾರಣೆ ಏಪ್ರಿಲ್ 4ರಂದು ನಡೆಯಲಿದೆ.
ಶೇಖ್ ಮತ್ತು ಅವರ ಸಹಚರರು ಸಂದೇಶ್‌ಖಾಲಿ ಸುತ್ತಮುತ್ತ ಭೂ ಕಬಳಿಕೆ ಮಾಡಿದ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.