Calcutta High Court, Sandeshkhali violence 
ಸುದ್ದಿಗಳು

ಸಂದೇಶ್‌ಖಾಲಿ: ಶಹಜಹಾನ್‌ ಶೇಖ್‌ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ಕಲ್ಕತ್ತಾ ಹೈಕೋರ್ಟ್‌

Bar & Bench

ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಬಲವಂತವಾಗಿ ಜಮೀನು ಕಿತ್ತುಕೊಂಡಿರುವ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್‌ ಬುಧವಾರ ಸಿಬಿಐಗೆ ವರ್ಗಾಯಿಸಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲು ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾ. ಹಿರಣ್ಮಯ್‌ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠ ನಿರಾಕರಿಸಿದೆ.

“ಆರೋಪಿಸಲಾಗಿರುವ ಅಪರಾಧಿಕ ಅಂಶದ ಕುರಿತು ತನಿಖೆ ನಡೆಸುವ ಅಧಿಕಾರವುಳ್ಳ ತನಿಖಾ ಸಂಸ್ಥೆಯಿಂದ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂಬುದರಲ್ಲಿ ನಮಗೆ ಯಾವುದೇ ಅನುಮಾನವಿಲ್ಲ. ನ್ಯಾಯದ ಹಿತದೃಷ್ಟಿಯಿಂದ ಇದು ಅವಶ್ಯಕವಾಗಿದೆ. ವಿವಿಧ ದೂರುಗಳು ಮತ್ತು ಆರೋಪಗಳನ್ನು ತ್ವರಿತವಾಗಿ ಪರಿಗಣಿಸಲು ನಿಷ್ಪಕ್ಷಪಾತ ತನಿಖೆ ನಡೆಸುವುದು ಅವಶ್ಯಕ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ತನಿಖೆ ನಡೆಸಲು ನಾವು ನೇಮಿಸಿದ ಸಂಸ್ಥೆಗೆ ರಾಜ್ಯ ಸರ್ಕಾರವು ಸೂಕ್ತ ಬೆಂಬಲ ನೀಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

CJ TS Sivagnanam and Justice Hiranmay Bhattacharyya

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿಯ ಜನರೂ ಸೇರಿದಂತೆ ಸಾರ್ವಜನಿಕರಿಂದ ಬಲವಂತವಾಗಿ ಜಮೀನು ಕಿತ್ತುಕೊಂಡಿರುವ ಆರೋಪಗಳ ಸ್ವರೂಪಗಳ ಹಿನ್ನೆಲೆಯನ್ನು ನ್ಯಾಯಾಲಯ ಪರಿಗಣಿಸಿದೆ.

“ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸುವುದಕ್ಕೆ ಬದಲಾಗಿ ಇದಾಗಲೇ ಇತ್ತೀಚಿನ ಘಟನೆಯೊಂದರ ತನಿಖೆಯನ್ನು ಸಿಬಿಐ ನಡೆಸುತ್ತಿರುವುದರಿಂದ ಸಂದೇಶ್‌ಖಾಲಿಯಲ್ಲಿನ ಜನರ ದೂರು ದುಮ್ಮಾನಗಳ ತನಿಖೆಯನ್ನು ಸಿಬಿಐ ನಡೆಸಿ ವರದಿ ಸಲ್ಲಿಸಲು ಆದೇಶಿಸಬಹುದು ಎಂಬುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ದೂರುದಾರರ ಗೌಪ್ಯತೆ ಕಾಪಾಡುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದ್ದು, ದೂರು ಸಲ್ಲಿಸಲು ಪ್ರತ್ಯೇಕ ಪೋರ್ಟಲ್‌/ ಇಮೇಲ್‌ ಐಡಿ ಸೃಷ್ಟಿಸುವಂತೆ ಸೂಚಿಸಿದೆ. ಈ ಸಂಬಂಧ ಸೂಕ್ತ ಪ್ರಚಾರ ನೀಡುವಂತೆ ನಾರ್ಥ್‌ 24 ಪರಗಣಾಸ್‌ ಜಿಲ್ಲಾ ದಂಡಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

“ಪ್ರಕರಣದ ಕುರಿತು ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪರಿಗಣಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ದಾವೆಯ ನೈಜತೆಯನ್ನು ಪರಿಶೀಲಿಸುವ ವಿಚಾರ ಅಪ್ರಸ್ತುತವಾಗಿದೆ. ಈ ವಿಚಾರದ ಕುರಿತು ಅಡ್ವೊಕೇಟ್‌ ಜನರಲ್‌ ಮಾಡಿರುವ ವಾದದಲ್ಲಿ ಯಾವುದೇ ವಿಚಾರಣಾರ್ಹತೆ ಇಲ್ಲ” ಎಂದಿದೆ.