ಸಂದೇಶ್‌ಖಾಲಿಯಲ್ಲಿ ಭೂ ಕಬಳಿಕೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕ ಶೇಖ್ ಶಹಜಹಾನ್ ಅವರ ಬಂಧನ ತಡೆಹಿಡಿಯುವಂತೆ ಅಥವಾ ಪ್ರತಿಬಂಧಿಸುವಂತೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ಶಹಜಹಾನ್ ನಿವಾಸದ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವ ಏಕಸದಸ್ಯ ಪೀಠದ ಆದೇಶಕ್ಕೆ ಮಾತ್ರ ನ್ಯಾಯಾಲಯ ತಡೆ ನೀಡಿರುವುದಾಗಿ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
"ಬಂಧನಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ತನಿಖೆಗೆ ತಡೆಯಾಜ್ಞೆ ಎಂದರೆ ಬಂಧನಕ್ಕೆ ತಡೆ ನೀಡಲಾಗಿದೆ ಎಂದರ್ಥವಲ್ಲ. ಎಫ್ಐಆರ್ ದಾಖಲಿಸಲಾಗಿದೆ, ಅವರನ್ನು ಆರೋಪಿ ಎಂದು ಗುರುತಿಸಲಾಗಿದ್ದು ಬಂಧಿಸಬೇಕು" ಎಂದು ನ್ಯಾಯಾಲಯ ಇಂದು ಹೇಳಿದೆ.
ಶೇಖ್ ಅವರಿಂದ ಸಂದೇಶ್‌ಖಾಲಿಯಲ್ಲಿ ವಿವಿಧ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದು ಆದಿವಾಸಿ ಜನರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಪ್ರಾರಂಭಿಸಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
ಶಹಜಹಾನ್ ಬಂಧನ ತಡೆಯುವಂತೆ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ ಎಂದ ಪೀಠ ಪ್ರಕರಣದಲ್ಲಿ ಶೇಖ್ ಅವರನ್ನು ಪಕ್ಷಕಾರನನ್ನಾಗಿ ಸೇರಿಸಿದೆ.
"ಆದರೆ ಶೇಖ್ ನಾಪತ್ತೆಯಾಗಿರುವ ಕಾರಣ, ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಹೊಂದಿರುವ ಬಂಗಾಳಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಸಾರ್ವಜನಿಕ ನೋಟಿಸ್ ನೀಡುವಂತೆ ನಾವು ರಿಜಿಸ್ಟ್ರಿಗೆ ನಿರ್ದೇಶನ ನೀಡುತ್ತೇವೆ" ಎಂದು ಕೂಡ ನ್ಯಾಯಾಲಯ ಹೇಳಿದೆ. ಮಾರ್ಚ್ 4ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.