Minister K S Eswarappa and Udupi City Police Station 
ಸುದ್ದಿಗಳು

ಸಂತೋಷ್ ಶಂಕಾಸ್ಪದ ಸಾವು: ಮೊದಲನೇ ಆರೋಪಿಯಾಗಿರುವ ಸಚಿವ ಕೆ ಎಸ್‌ ಈಶ್ವರಪ್ಪ ವಿರುದ್ಧ ಎಫ್‌ಐಆರ್‌ನಲ್ಲಿ ಇರುವುದೇನು?

ಕೃತ್ಯಕ್ಕೆ ಆರೋಪಿಗಳಾದ ಸಚಿವ ಈಶ್ವರಪ್ಪ ಅವರ ಆಪ್ತರಾದ ಬಸವರಾಜ್, ರಮೇಶ್ ಮತ್ತಿತರರು ಕಾರಣರಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಫ್ಐಆರ್‌ನಲ್ಲಿ ವಿವರಿಸಲಾಗಿದೆ.

Bar & Bench

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಶಂಕಾಸ್ಪದ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಸಚಿವ ಕೆ ಎಸ್‌ ಈಶ್ವರಪ್ಪ ಅವರ ವಿರುದ್ಧ ಸಂತೋಷ್‌ ಸಹೋದರ ಪ್ರಶಾಂತ್‌ ಗೌಡಪ್ಪ ಪಾಟೀಲ ದೂರು ದಾಖಲಿಸಿದ್ದು ಈ ಸಂಬಂಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಈಶ್ವರಪ್ಪ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆ ಕೆಲಸದ ಹಣ ಬಿಡುಗಡೆಗೆ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಬೆಳಗಾವಿಯ ಸಂತೋಷ್‌ ಪಾಟೀಲ ನಿನ್ನೆ ಬೆಳಿಗ್ಗೆ ಉಡುಪಿಯ ಲಾಡ್ಜ್‌ ಒಂದರಲ್ಲಿ (ಮಂಗಳವಾರ) ಶಂಕಾಸ್ಪದವಾಗಿ ಮೃತರಾಗಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಸುದ್ದಿ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದು ಘಟನೆಯನ್ನು ರಾಹುಲ್‌ ಗಾಂಧಿ ಮತ್ತಿತರರು ಖಂಡಿಸಿದ್ದರು.

ಐಪಿಸಿ ಸೆಕ್ಷನ್‌ 306 ಸಹವಾಚನ 34ರ ಅಡಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣವನ್ನು ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದು ಅವರನ್ನು ಒಂದನೇ ಆರೋಪಿ ಎಂದು ಹೆಸರಿಸಲಾಗಿದೆ. ಬುಧವಾರ ಮಧ್ಯಾಹ್ನ ಎಫ್‌ಐಆರ್‌ ದಾಖಲಾಗಿದೆ.

ಸಚಿವ ಈಶ್ವರಪ್ಪ ವಿರುದ್ಧದ ದಾಖಲಾಗಿರುವ ಎಫ್‌ಐಆರ್‌ನ ಪ್ರಮುಖ ಅಂಶಗಳು:

ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮೀಜಿಗಳು ಸೇರಿ ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೇವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಡಬೇಕೆಂದು ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿದ್ದರು. ಆಗ ಈಶ್ವರಪ್ಪ ಅವರು “ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ, ಕೆಲಸ ಶುರು ಮಾಡಿ" ಎಂದಿದ್ದರು.

ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಂತೋಷ್‌ ಪಾಟೀಲ್‌ಗೆ ಕೆಲಸ ಮಾಡಲು ತಿಳಿಸಿದ್ದರು. ಅದರಂತೆ ಪಾಟೀಲ್‌ ಮತ್ತಿತರ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿದ್ದರು.

ಕಾಮಗಾರಿ ಪೂರ್ಣಗೊಂಡ ಬಳಿಕ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರನ್ನು ಹಲವು ಬಾರಿ ಭೇಟಿಯಾಗಿ “ಕೆಲಸ ಪೂರ್ಣಗೊಳಿಸಿದ್ದೇವೆ. ಬಿಲ್‌ ಮಂಜೂರು ಮಾಡಿ” ಎಂದು ವಿನಂತಿಸಿದ್ದರು. ಆದರೆ ಆಗುವುದಿಲ್ಲಾ 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಅವರು ಹೇಳಿದ್ದರು. ಈ ಕಮೀಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿದ್ದರು. ಅದೇ ರೀತಿ ಸಂತೋಷ ಪಾಟೀಲ್ ಕಳೆದ ಮಾರ್ಚ್‌ನಲ್ಲಿ ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮೀಷನ್‌ಗೆ ಬೇಡಿಕೆ ಇಟ್ಟಿದ್ದಾರೆಂದು ಮಾದ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಮೃತ ಸಂತೋಷ್‌ ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿದ್ದರು.

ಕುಟುಂಬಸ್ಥರು ಸಂತೋಷ್‌ ಅವರಿಗೆ ಪದೇ ಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈಶ್ವರಪ್ಪ ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು. ಇದೇ ಬಿಲ್ ಪಾಸ್ ಆಗಿರಲಿಲ್ಲ. ಹೀಗಾಗಿ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಫೂಟೇಜ್ ಮುಖಾಂತರ “ಬಿಲ್‌ ಪಾಸಾಗದ ಕಾರಣ ಮುಂದಾಗುವ ಅನಾಹುತಕ್ಕೆ ನೀವೇ ಕಾರಣ" ಎಂದು ಪ್ರಸ್ತಾಪಿಸಿದ್ದರು.

ಸಂತೋಷ್‌ ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ವಿನಿಯೋಗಿಸಿ ಅಡಚಣೆಯಾಗಿತ್ತು. ಹೀಗಾಗಿ 40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ್ ಸಿಂಗ್ ರವರಿಗೆ ಹಾಗೂ ದೆಹಲಿ ಮಟ್ಟದ ಬಿಜೆಪಿ ವರಿಷ್ಟರಿಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಈಶ್ವರಪ್ಪ ಕಮೀಷನ್ ಕುರಿತು ಮನವಿ ಸಲ್ಲಿಸಿದ್ದರು.

ಇಷ್ಟಾದರೂ ಬಿಲ್‌ ಪಾಸ್‌ ಆಗಿರಲಿಲ್ಲ. ಇದೇ ವಿಚಾರವಾಗಿ ಸಂತೋಷ ಪಾಟೀಲ್‌ ಮನನೊಂದು ತನ್ನ ಮೊಬೈಲಿನಿಂದ ವಾಟ್ಸಾಪ್‌ ಮೂಲಕ ಡೆತ್ ನೋಟ್ ಸಂದೇಶವನ್ನು ಮಾಧ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ಏ. 11ರ ರಾತ್ರಿ ಉಡುಪಿಯ ಶಾಂಭವಿ ಲಾಡ್ಜ್ ನ ರೂ ನಂಬರ್‌ 207ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಈಶ್ವರಪ್ಪ ಬಸವರಾಜ್‌ ರಮೇಶ್‌ ಮತ್ತಿತರರು ಕಾರಣರಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.