K S Eshwarappa
K S Eshwarappa 
ಸುದ್ದಿಗಳು

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ: ʼಬಿʼ ರಿಪೋರ್ಟ್‌ ಅಂಗೀಕರಿಸಿದ ವಿಶೇಷ ನ್ಯಾಯಾಲಯ; ಈಶ್ವರಪ್ಪ ವಿರುದ್ಧದ ದೂರು ಮುಕ್ತಾಯ

Bar & Bench

ಬಿಜೆಪಿ ಮುಖಂಡ, ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಮೊದಲ ಆರೋಪಿಯಾಗಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಉಡುಪಿ ಪೊಲೀಸರು ಸಲ್ಲಿಸಿದ್ದ ʼಬಿʼ ರಿಪೋರ್ಟ್‌ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಅಂಗೀಕರಿಸಿದೆ. ಇದರೊಂದಿಗೆ ಪ್ರಕರಣ ಮುಕ್ತಾಯವಾಗಿದ್ದು, ಈಶ್ವರಪ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಉಡುಪಿ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ಸಲ್ಲಿಸಿದ್ದ ʼಬಿʼ ರಿಪೋರ್ಟ್‌ ಅನ್ನು 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಶಾಸಕರು/ಸಂಸದರ ವಿರುದ್ಧದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಬಹುದಾದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶೆಯಾದ ಪ್ರೀತ್‌ ಜೆ ಅವರು ಅಂಗೀಕರಿಸಿದ್ದಾರೆ.

“ಉಡುಪಿಯ ನಗರ ಠಾಣೆಯ ತನಿಖಾಧಿಕಾರಿ ಸಲ್ಲಿಸಿರುವ ʼಬಿʼ ರಿಪೋರ್ಟ್‌ ಅನ್ನು ಅಂಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಮತ್ತು ಇಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಮುಕ್ತಾಯಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧದ ಪ್ರಕರಣ ಕೈಬಿಡಲಾಗಿದೆ ಎಂದು ಹೇಳಲಾಗಿತ್ತು.

ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆ ಕೆಲಸದ ಹಣ ಬಿಡುಗಡೆಗೆ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ 2022ರ ಏಪ್ರಿಲ್‌ 11ರಂದು ಶವವಾಗಿ ಪತ್ತೆಯಾಗಿದ್ದರು. ಸಂತೋಷ್‌ ಸಹೋದರ ಪ್ರಶಾಂತ್‌ ಗೌಡಪ್ಪ ಪಾಟೀಲ ದೂರು ಆಧರಿಸಿ ಉಡುಪಿ ಪೊಲೀಸರು ಈಶ್ವರಪ್ಪ, ಬಸರಾಜ ಕುರಿ ಮತ್ತು ರಮೇಶ್‌ ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಈಶ್ವರಪ್ಪ ಮೊದಲ ಆರೋಪಿಯಾಗಿದ್ದರು.