Adv Sarah Sunny  
ಸುದ್ದಿಗಳು

ಕೌಟುಂಬಿಕ ಪ್ರಕರಣದಲ್ಲಿ ವಾದಿಸಲಿರುವ ಶ್ರವಣದೋಷವುಳ್ಳ ವಕೀಲೆ ಸಾರಾ; ವಿಶೇಷ ಕಲಾಪಕ್ಕೆ ಸಾಕ್ಷಿಯಾಗಲಿದೆ ಹೈಕೋರ್ಟ್‌

ಪ್ರಕರಣದಲ್ಲಿ ಪತ್ನಿಯ ಪರವಾಗಿ ಸಾರಾ ಸನ್ನಿ ವಾದ ಮಂಡಿಸಲು ಕೋರಿ ಗುರುವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಮನವಿ ಮಾಡಿದರು.

Bar & Bench

ಸರ್ವೋಚ್ಚ ನ್ಯಾಯಾಲಯದಲ್ಲಿ ದುಭಾಷಿಯ ನೆರವಿನಿಂದ ಸಂಕೇತ ಭಾಷೆ ಬಳಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾದ ಮಂಡಿಸಿ ಇತಿಹಾಸ ಸೃಷ್ಟಿಸಿರುವ ಬೆಂಗಳೂರಿನ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲೂ ವಾದ ಮಂಡಿಸಲು ಸಿದ್ಧರಾಗಿದ್ದಾರೆ. ಕರ್ನಾಟಕ ಹೈಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಇಂತಹದೊಂದು ವಿಶೇಷ ಕಲಾಪಕ್ಕೆ ಹೈಕೋರ್ಟ್‌ ಏಪ್ರಿಲ್‌ 8ರಂದು ಸಾಕ್ಷಿಯಾಗಲಿದೆ.

ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಭಾಗವಾಗಿ ಪತಿಗೆ ಲುಕ್‌ ಔಟ್‌ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತಾದ ಪ್ರಕರಣದಲ್ಲಿ ಪತ್ನಿಯ ಪರವಾಗಿ ಸಾರಾ ಸನ್ನಿ ವಾದ ಮಂಡಿಸಲು ಕೋರಿ ಗುರುವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರಕರಣದ ಪ್ರತಿವಾದಿಗಳಾದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಮತ್ತು ಉಪ ಸಾಲಿಸಿಟರ್‌ ಜನರಲ್ ಎಚ್ ಶಾಂತಿಭೂಷಣ್‌ ಒಪ್ಪಿಗೆ ಸೂಚಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ಸಾರಾ ಸನ್ನಿ ಅವರಿಗೆ ದುಭಾಷಿ ನೆರವು ನೀಡಲು ವ್ಯವಸ್ಥೆ ಕಲ್ಪಿಸಿ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ನಿಗದಿಗೊಳಿಸಿದೆ.