High Court of Karnataka
High Court of Karnataka  
ಸುದ್ದಿಗಳು

ತೋಟಗಾರಿಕಾ ಬೆಳೆ ಬೆಳೆಯುವ ಭೂಮಿಗೆ ಸರ್ಫೇಸಿ ಕಾಯಿದೆ ಅನ್ವಯ, ಕೃಷಿ ಭೂಮಿಗೆ ಸಿಗುವ ವಿನಾಯಿತಿ ಸಿಗದು: ಹೈಕೋರ್ಟ್‌

Bar & Bench

ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯ (ಸರ್ಫೇಸಿ) ಸೆಕ್ಷನ್‌ 31(ಐ)ರಲ್ಲಿ ಉಲ್ಲೇಖಿಸಿರುವ 'ಕೃಷಿ ಭೂಮಿ'ಯು ತೋಟಗಾರಿಕಾ ಬೆಳೆಗೆಳಾದ ಏಲಕ್ಕಿ, ಕಾಫಿ, ಮೆಣಸು, ರಬ್ಬರ್‌ ಮತ್ತು ಚಹಾ ಬೆಳೆಯುವ ಭೂಮಿಯನ್ನು ಒಳಗೊಳ್ಳುವುದಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ (ಯು ಎಂ ರಮೇಶ್‌ ರಾವ್‌ ವರ್ಸ್‌ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ).

ಕೃಷಿ ಭೂಮಿಗೆ ಸಿಗುವ ವಿನಾಯಿತಿಯು ತೋಟಗಾರಿಕೆ ಬೆಳೆ ಬೆಳೆಯುವ ಭೂಮಿಗೆ ಅನ್ವಯಿಸುವುದಿಲ್ಲ. ಸರ್ಫೇಸಿ ಕಾಯಿದೆಯು ಅಂತಹ ಭೂಮಿಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ನಟರಾಜ್‌ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Justice B.V.Nagarathna, Justice Nataraj Rangaswamy

“ಸರ್ಫೇಸಿ ಕಾಯಿದೆಯ ಸೆಕ್ಷನ್‌ 31(ಐ)ರಲ್ಲಿ ವಿವರಿಸಲಾಗಿರುವ ಕೃಷಿ ಭೂಮಿಯು ಭೂಸುಧಾರಣಾ ಕಾಯಿದೆಯ ಸೆಕ್ಷನ್‌ 2(ಎ)(25)ರಲ್ಲಿ ವಿವರಿಸಲಾಗಿರುವಂತೆ ತೋಟಗಾರಿಕಾ ಬೆಳೆಗೆಳಾದ ಏಲಕ್ಕಿ, ಕಾಫಿ, ಮೆಣಸು, ರಬ್ಬರ್‌ ಮತ್ತು ಚಹಾ ಬೆಳೆಯುವ ಭೂಮಿಯನ್ನು ಒಳಗೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ಮನವಿಯಲ್ಲಿ ಕಾಫಿ ಎಸ್ಟೇಟ್‌ಗಳಿಗೆ ಸಂಬಂಧಿಸಿದಂತೆ ಪ್ರತಿವಾದಿ ಬ್ಯಾಂಕ್‌ಗಳು ಜಾರಿಗೊಳಿಸಿರುವ ಕ್ರಮಗಳು ಸರ್ಫೇಸಿ ಕಾಯಿದೆಯ ಸೆಕ್ಷನ್‌ 31(ಐ) ಸಂಬಂಧಪಡುವುದಿಲ್ಲ. ಸದರಿ ಪ್ರಕರಣಗಳೂ ಸೇರಿದಂತೆ ಮೇಲೆ ಹೇಳಲಾದ ಕಾಯಿದೆಯು ಕಾಫಿ ತೋಟ ಸೇರಿದಂತೆ ತೋಟಗಾರಿಕಾ ಭೂಮಿಗೆ ಅನ್ವಯಿಸುತ್ತದೆ,” ಎಂದು ನ್ಯಾಯಾಲಯ ಹೇಳಿದೆ.

ಕಾಫಿ ಬೆಳೆಯುವ ಭೂಮಿಯು ಕೃಷಿ ಭೂಮಿಯೋ ಅಥವಾ ಇಲ್ಲವೋ ಎಂಬ ಪ್ರಮುಖ ಪ್ರಶ್ನೆ ನ್ಯಾಯಾಲಯದ ಮುಂದಿತ್ತು. ಇದನ್ನು ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಫೇಸಿ ಕಾಯಿದೆಯ ಉದ್ದೇಶ ಮತ್ತು ವ್ಯಾಪ್ತಿಯನ್ನು ವಿಶ್ಲೇಷಣೆಗೆ ಒಳಪಡಿಸಿತ್ತು.

“ಹಣಕಾಸಿನ ಸ್ವತ್ತುಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ ಮತ್ತು ಅಡಮಾನ ಭದ್ರತೆ ಜಾರಿಗೊಳಿಸುವಿಕೆಯನ್ನು ನಿಯಂತ್ರಿಸುವುದು ಮತ್ತು ಆಸ್ತಿ ಹಕ್ಕುಗಳ ಮೇಲೆ ಸೃಜಿಸಲಾದ ಭದ್ರತಾ ಅಡಮಾನ ದತ್ತಾಂಶ ಕೇಂದ್ರಕ್ಕೆ ಮಾಹಿತಿ ಒದಗಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳು ಈ ಕಾಯಿದೆಯ ಉದ್ದೇಶದಲ್ಲಿವೆ” ಎಂದು ಪೀಠ ಹೇಳಿದೆ.

ಇದಕ್ಕಾಗಿ ಪೀಠವು ಕರ್ನಾಟಕ ಭೂಸುಧಾರಣಾ ಕಾಯಿದೆಯನ್ನು ಆಧರಿಸಿತ್ತು. ತೋಟಗಾರಿಕಾ ಬೆಳೆ ಬೆಳೆಯುವ ಭೂಮಿಗೆ ಮಿತಿಗಳು ಅನ್ವಯಿಸುವುದಿಲ್ಲ, ಭೂ ಸುಧಾರಣಾ ಕಾಯ್ದೆಯಡಿ ಅಂತಹ ನಿರ್ಬಂಧಗಳಿಗೆ ಒಳಪಡದೆ ಮಾರಾಟ, ಗುತ್ತಿಗೆ, ಉಡುಗೊರೆ, ಅಡಮಾನ ಅಥವಾ ವಿನಿಮಯದ ಮೂಲಕ ಅವುಗಳನ್ನು ನಿಭಾಯಿಸಬಹುದು ಎಂದು ನ್ಯಾಯಾಲಯ ಹೇಳಿದೆ.

“ಹೀಗಾಗಿ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 104 ಮತ್ತು ಸೆಕ್ಷನ್ 81, ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಜಮೀನುಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 79-ಎ ನಲ್ಲಿ ಉಲ್ಲೇಖಿಸಲಾದ ಕೃಷಿ ಭೂಮಿಗೆ ಸಂಬಂಧಿಸಿದ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. 79-ಬಿ ಮತ್ತು 80, ಈ ಕಾಯಿದೆಯ ಸೆಕ್ಷನ್ 104 ಮತ್ತು ಸೆಕ್ಷನ್ 81, ಸರ್ಫೇಸಿ ಕಾಯಿದೆಯ ಸೆಕ್ಷನ್ 31 (ಐ) ಅಡಿ “ಕೃಷಿ ಭೂಮಿ” ವ್ಯಾಪ್ತಿಗೆ ಬರುವುದಿಲ್ಲ” ಎಂದು ತೀರ್ಪಿನಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಕೃಷಿ ನಗದು ಕ್ರೆಡಿಟ್‌ ಸಾಲಗಳು, ಕೃಷಿ ಅವಧಿ ಸಾಲಗಳು ಮತ್ತು ಅಡಮಾನ ಸಾಲುಗಳನ್ನು ಅರ್ಜಿದಾರರ ಕಾಫಿ ತೋಟವನ್ನು ಆಧರಿಸಿ ಪ್ರತಿವಾದಿ ಬ್ಯಾಂಕ್‌ (ಹಿಂದಿನ ಕಾರ್ಪೊರೇಷನ್‌ ಬ್ಯಾಂಕ್‌) ನೀಡಿತ್ತು. ಕಾರ್ಪೊರೇಟ್‌ ಕಿಸಾನ್ ನಗದು ಕ್ರೆಡಿಟ್‌ ಯೋಜನೆಯ ಮೂಲಕ ಸಾಲ ಮಂಜೂರು ಮಾಡಲಾಗಿತ್ತು. ಕೃಷಿ ಅವಧಿ ಸಾಲದ ರೂಪದಲ್ಲಿ 4.9 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ಅದನ್ನು ಹಿಂದಿನ ಮಾಲೀಕರಿಗೆ ಪಾವತಿಸಿ 154.17 ಎಕರೆ ಯೆಲ್ಲಿಕುಡಿಗೆ ಎಸ್ಟೇಟ್ ಮೇಲೆ ಸಂಪೂರ್ಣ ಹಕ್ಕು ಸಾಧಿಸುವ ಉದ್ದೇಶವನ್ನು ಅರ್ಜಿದಾರರು ಹೊಂದಿದ್ದರು.

ಅರ್ಜಿದಾರರು ಸಾಲ ಮರುಪಾವತಿಸದೇ ಇದ್ದಾಗ ಸರ್ಫೇಯಿ ಕಾಯಿದೆಯ ಸೆಕ್ಷನ್‌ 13(2)ರ ಅಡಿ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಿ 18,81,45,558 ರೂಪಾಯಿ ಪಾವತಿಸುವಂತೆ ಮೊದಲನೇ ಅರ್ಜಿದಾರರಿಗೆ ಸೂಚಿಸಲಾಗಿತ್ತು. ಹಣ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸರ್ಫೇಸಿ ಕಾಯಿದೆಯ ಅನ್ವಯ ಆಸ್ತಿಯನ್ನು ಇ-ಹರಾಜಿಗೆ ಇಡಲು ಮುಂದಾಗಿತ್ತು.

ಬ್ಯಾಂಕ್‌ ನಿರ್ಧಾರ ಪ್ರಶ್ನಿಸಿ ಮೊದಲನೇ ಅರ್ಜಿದಾರರು ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯಾಧಿಕರಣ- Iರ ಮೆಟ್ಟಿಲೇರಿದ್ದು, ಇ-ಹರಾಜಿಗೆ ತಡೆ ನೀಡುವಂತೆ ಕೋರಿದ್ದರು. ಸರ್ಫೇಸಿ ಕಾಯಿದೆಯ ಅನ್ವಯ ಬ್ಯಾಂಕ್‌ ಪ್ರಕ್ರಿಯೆ ಆರಂಭಿಸಿರುವುದರಿಂಧ ಅರ್ಜಿದಾರರು ಸರ್ಫೇಸಿ ಕಾಯಿದೆಯ ಸೆಕ್ಷನ್‌ 17ರ ಅನ್ವಯ ಮೇಲ್ಮನವಿ ಸಲ್ಲಿಸಬಹುದು ಎಂದು ಡಿಆರ್‌ಟಿ ಆದೇಶಿಸಿ, ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇದೇ ಆಧಾರದಲ್ಲಿ ಮತ್ತೊಂದು ಮೇಲ್ಮನವಿ ವಿಚಾರಣೆಯು ನ್ಯಾಯಾಲಯದ ಮುಂದಿತ್ತು. ಈ ಹಿನ್ನೆಲೆಯಲ್ಲಿ 'ಕೃಷಿ ಭೂಮಿ' ಎನ್ನುವುದು 'ತೋಟಗಾರಿಕಾ ಭೂಮಿ'ಗೆ ಅನ್ವಯಿಸುತ್ತದೆಯೋ ಇಲ್ಲವೋ ಎನ್ನುವ ಪ್ರಶ್ನೆ ಪ್ರಮುಖವಾಗಿತ್ತು.

ಅಂತಿಮವಾಗಿ ನ್ಯಾಯಾಲಯವು ತೋಟಗಾರಿಕಾ ಭೂಮಿಯು 'ಕೃಷಿ ಭೂಮಿ'ಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವುದನ್ನು ಖಾತರಿಪಡಿಸಿತು. ಇದರಿಂದಾಗಿ ತೋಟಗಾರಿಕಾ ಬೆಳೆ ಬೆಳೆದಿರುವ ಭೂಮಿಯ ಆಸ್ತಿ ವರ್ಗಾವಣೆಯನ್ನು ಅಡಮಾನ ಮಾಡಿರುವ ಹಣಕಾಸು ಸಂಸ್ಥೆ ಪರವಾಗಿ ಮಾಡಲು ಹಾಗೂ ಹಾಗೆ ಹಣಕಾಸು ಸಂಸ್ಥೆಗೆ ಅಡವಿಡಲಾದ ಆಸ್ತಿಯನ್ನು ಭದ್ರತೆಯ ಜಾರಿಗಾಗಿ ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ ಎನ್ನುವುದು ಖಾತರಿಯಾದಂತಾಗಿದೆ.