ಕಿಶೋರ್ ಬಿಯಾನಿ
ಕಿಶೋರ್ ಬಿಯಾನಿ 
ಸುದ್ದಿಗಳು

ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್, ಕಿಶೋರ್ ಬಿಯಾನಿ ವ್ಯವಹರಿಸದಂತೆ ಸೆಬಿ ನೀಡಿದ್ದ ಆದೇಶ ರದ್ದುಪಡಿಸಿದ ಎಸ್ಎಟಿ

Bar & Bench

ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಫ್ಯೂಚರ್ ಗ್ರೂಪ್‌ನ ಸ್ಥಾಪಕ ಮತ್ತು ಸಿಇಒ ಕಿಶೋರ್ ಬಿಯಾನಿ ಅವರನ್ನು ಒಂದು ವರ್ಷದವರೆಗೆ ನಿಷೇಧಿಸಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಫೆಬ್ರವರಿ 2021ರಲ್ಲಿ ಹೊರಡಿಸಿದ್ದ ಆದೇಶವನ್ನು ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್ಎಟಿ) ರದ್ದುಗೊಳಿಸಿದೆ.  

ಬಿಯಾನಿ ಮತ್ತು ಫ್ಯೂಚರ್ ಕಾರ್ಪೊರೇಟ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ (ಫ್ಯೂಚರ್) 2017ರಲ್ಲಿ ಅಪ್ರಕಟಿತ ಬೆಲೆ ಸೂಕ್ಷ್ಮ ಮಾಹಿತಿಯ (ಯುಪಿಎಸ್ಐ) ಆಧಾರದ ಮೇಲೆ ವಹಿವಾಟು ನಡೆಸುವ ಮೂಲಕ ಆಂತರಿಕ ವ್ಯಾಪಾರ ನಿಯಮಾವಳಿ ಉಲ್ಲಂಘಿಸಿವೆ ಎಂಬ ಸೆಬಿಯ ತೀರ್ಪನ್ನು ಎಸ್‌ಎಟಿ ಅಧ್ಯಕ್ಷರಾದ ನ್ಯಾಯಮೂರ್ತಿ ತರುಣ್ ಅಗರ್‌ವಾಲ್‌ ಮತ್ತು ತಾಂತ್ರಿಕ ಸದಸ್ಯೆ ಮೀರಾ ಸ್ವರೂಪ್ ಅವರನ್ನು ಒಳಗೊಂಡ ಕೋರಂ ಒಪ್ಪಲಿಲ್ಲ.

ಫ್ಯೂಚರ್ ರೀಟೇಲ್ ಲಿಮಿಟೆಡ್‌ನಿಂದ ಹೋಮ್ ರಿಟೇಲ್ ವ್ಯವಹಾರ ನಡೆಸುವ ʼಹೋಮ್‌ಟೌನ್‌ʼನ್ನು ಬೇರ್ಪಡಿಸಿ ʼಫ್ಯಾಬ್‌ಫರ್ನಿಶ್‌ʼ ವಿಲೀನಗೊಳಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಬಿಯಾನಿ, ಫ್ಯೂಚರ್ ಮತ್ತಿತರರು ಯುಪಿಎಸ್ಐ ಆಧಾರದ ಮೇಲೆ ವಹಿವಾಟು ನಡೆಸಿದ್ದಾರೆ ಎಂದು ಸೆಬಿ ತೀರ್ಪು ನೀಡಿತ್ತು.

ಇದು ಗುಪ್ತ ವ್ಯಾಪಾರದ ಮೇಲೆ ವಿಧಿಸಲಾಗಿದ್ದ ನಿಷೇಧದ ಉಲ್ಲಂಘನೆ ಎಂದು ಬಣ್ಣಿಸಿದ್ದ ಸೆಬಿ, ಫೆಬ್ರವರಿ 3, 2021ರಂದು ಆದೇಶ ನೀಡಿ ಬಿಯಾನಿ ಮತ್ತು ಫ್ಯೂಚರ್ ಒಂದು ವರ್ಷದವರೆಗೆ ಯಾವುದೇ ವಹಿವಾಟು ನಡೆಸದಂತೆ ನಿಷೇಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಫ್ಯೂಚರ್, ಬಿಯಾನಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ಎಸ್ಎಟಿ ಸೆಬಿ ಆದೇಶವನ್ನು ತಡೆಹಿಡಿದಿದೆ .

ಬಿಯಾನಿ ಮತ್ತು ಫ್ಯೂಚರ್ ತಮ್ಮ ವಹಿವಾಟುಗಳನ್ನು ನಡೆಸಿದ ಮಾಹಿತಿ ವಿವಿಧ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಲಭ್ಯವಿರುವುದರಿಂದ ಬಿಯಾನಿ ಮತ್ತು ಫ್ಯೂಚರ್ ಆಂತರಿಕ ಮಾಹಿತಿಯನ್ನು ಆಧರಿಸಿದ ಷೇರು ವಹಿವಾಟಿನಲ್ಲಿ (ಇನ್‌ಸೈಡರ್‌ ಟ್ರೇಡಿಂಗ್‌) ತೊಡಗಿಲ್ಲ ಎಂದು ಎಸ್ಎಟಿ ತೀರ್ಪು ಹೇಳಿದೆ.

ಎಕನಾಮಿಕ್ ಟೈಮ್ಸ್, ದಿ ಹಿಂದೂ ಬಿಸಿನೆಸ್, ಬಿಸಿನೆಸ್ ಲೈನ್ಸ್, ದಿ ಮನಿ ಕಂಟ್ರೋಲ್ ಸೇರಿದಂತೆ ಅನೇಕ ಮುದ್ರಣ ಮತ್ತು ಡಿಜಿಟಲ್ ಪ್ರಕಟಣೆಗಳಲ್ಲಿ ವಹಿವಾಟಿನ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದ್ದು ಇದರಲ್ಲಿ ವಹಿವಾಟಿನ ಸ್ವರೂಪವನ್ನು ಆಳವಾಗಿ ವಿವರಿಸಲಾಗಿದೆ. ಹೀಗಾಗಿ ಇದು ವಹಿವಾಟಿನ ಮಾಹಿತಿ ಸಾಮಾನ್ಯವಾಗಿ ಲಭ್ಯವಿದೆ ಎಂಬ ಅನಿರ್ಬಂಧಿತ ತೀರ್ಮಾನಕ್ಕೆ ಕಾರಣವಾಗುತ್ತದೆ ಎಂದು ಎಸ್ಎಟಿ ನುಡಿದಿದೆ.

ಡಿಸೆಂಬರ್ 20, 2023 ರ ತನ್ನ ಅಂತಿಮ ತೀರ್ಪಿನಲ್ಲಿ, ಉದ್ದೇಶಿತ ವಿಲೀನ ಮತ್ತು ವಿಲೀನಕ್ಕೆ ಸಂಬಂಧಿಸಿದ ಮಾಹಿತಿಯು ಮಾಧ್ಯಮ ಸಂದರ್ಶನಗಳು ಮತ್ತು ಲೇಖನಗಳ ಮೂಲಕ ಸಾರ್ವಜನಿಕ ಡೊಮೇನ್‌ನಲ್ಲಿ ಈಗಾಗಲೇ "ಸಾಮಾನ್ಯವಾಗಿ ಲಭ್ಯವಿದೆ" ಆದ್ದರಿಂದ, ಅಂತಹ ಮಾಹಿತಿಯು ಯುಪಿಎಸ್ಐ ಅಲ್ಲ ಎಂದು ಮೇಲ್ಮನವಿ ನ್ಯಾಯಮಂಡಳಿ ತೀರ್ಪು ನೀಡಿತು.

ಆದ್ದರಿಂದ, ಸೆಬಿಯ ತೀರ್ಪಿನ ವಿರುದ್ಧ ಬಿಯಾನಿ, ಫ್ಯೂಚರ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಎಸ್ಎಟಿ ಷೇರು ಮಾರುಕಟ್ಟೆಯಿಂದ ಅವರನ್ನು ನಿರ್ಬಂಧಿಸುವ ಸೆಬಿ ಆದೇಶವನ್ನು ರದ್ದುಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Future Corporate Resources and ors v. SEBI.pdf
Preview