ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಂಪೆನಿಗಳ ಜೊತೆ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದರ್ ಜೈನ್ ಅವರು ಸಂಪರ್ಕ ಹೊಂದಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದಾಗ ಅವರು ಕೋವಿಡ್‌ನಿಂದಾಗಿ ತಮಗೆ ನೆನಪಿನ ಶಕ್ತಿ ಕುಂದಿದೆ ಎಂದು ಹೇಳಿದರು ಎಂದು ಜಾರಿ ನಿರ್ದೇಶನಾಲಯವು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಸತ್ಯೇಂದರ್ ಜೈನ್ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಗೀತಾಂಜಲಿ ಗೋಯೆಲ್ ಅವರು ನಡೆಸಿದರು.
“ಲಾಲಾ ಶೇರ್ ಸಿಂಗ್ ಟ್ರಸ್ಟ್‌ನಲ್ಲಿ ಅಧ್ಯಕ್ಷರಾಗಿದ್ದಾಗ ಕೆಲವು ಒಂದೇ ತೆರನಾದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆಯ ಸಂದರ್ಭದಲ್ಲಿ ಮಾಹಿತಿ ದೊರೆತಿದೆ. ಯಾವ ಯಾವ ಕಂಪೆನಿ ಮತ್ತು ಟ್ರಸ್ಟ್‌ಗಳ ಜೊತೆ ನೀವು ಸಂಪರ್ಕ ಹೊಂದಿದ್ದೀರಿ ಎಂದು ಜೈನ್ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ, ಅವರು ಶೇರ್ ಸಿಂಗ್ ಟ್ರಸ್ಟ್ ಜೊತೆ ಸಂಪರ್ಕ ಹೊಂದಿರುವುದನ್ನು ಬಹಿರಂಗಪಡಿಸಿರಲಿಲ್ಲ. ಇಂದು ಅದನ್ನು ಹೇಳಿದ್ದಾರೆ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹೇಳಿದರು.
“ಆ ಟ್ರಸ್ಟ್ ಬಗ್ಗೆ ಕೇಳಿಲ್ಲ ಎಂದು ಜೈನ್ ಹೇಳಿದ್ದರು. ಕುಟುಂಬದ ಯಾವುದೇ ಸದಸ್ಯರು ಅದರ ಜೊತೆ ಸಂಬಂಧ ಹೊಂದಿಲ್ಲ ಎಂದಿದ್ದರು. ಮೊದಲು ಬಚ್ಚಿಟ್ಟು, ಆ ಟ್ರಸ್ಟ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ದಾಖಲೆಗಳನ್ನು ಮುಂದಿಟ್ಟು ಜಾರಿ ನಿರ್ದೇಶನಾಲಯಕ್ಕೆ ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ನಿರೂಪಿಸಲಾಯಿತು. ಆನಂತರ ಕೊಂಚ ಸುಧಾರಿಸಿದ್ದಾರೆ. ಸಂಬಂಧವೇ ಇಲ್ಲ ಎಂದಿದ್ದವರು ಕೋವಿಡ್‌ನಿಂದಾಗಿ ನೆನಪಿನ ಶಕ್ತಿ ಕುಂದಿದೆ ಎಂದು ಹೇಳಿದ್ದಾರೆ. ದಾಖಲೆಗಳನ್ನು ಮುಂದಿಟ್ಟ ಒಡನೆಯೇ ನೆನಪಿನ ಶಕ್ತಿ ಕುಂದಿದೆ ಎಂದು ರಕ್ಷಣೆಗೆ ಮೊರೆ ಹೋಗುತ್ತಾರೆ” ಎಂದರು.
ಇತ್ತ ಸಚಿವರ ಪರ ವಾದಿಸಿದ ಹಿರಿಯ ವಕೀಲ ಎನ್ ಹರಿಹರನ್ ಅವರು, ಜೈನ್ ಕುಲನಾಮ ಹೊಂದಿರುವ ಎಲ್ಲರೊಂದಿಗೆ ಸಚಿವ ಜೈನ್ ಅವರ ಸಂಪರ್ಕ ತೋರಿಸಲು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ ಎಂದು ಆಕ್ಷೇಪಿಸಿದರು. “ದೇಶದ ಎಲ್ಲಾ ಜೈನರೊಂದಿಗೆ ಸತ್ಯೇಂದರ್ ಜೈನ್ ಅವರು ಸಂಬಂಧಿಸಿದ್ದಾರೆ ಎಂದು ಅರ್ಥವಲ್ಲ” ಎಂದರು.
ಅಂತಿಮವಾಗಿ ನ್ಯಾಯಾಲಯವು ಜೈನ್ ಅವರ ಜಾಮೀನು ಮನವಿಯ ಆದೇಶವನ್ನು ಜೂನ್ 18ಕ್ಕೆ ಕಾಯ್ದಿರಿಸಿತು.