ಸ್ವಾತಂತ್ರ್ಯ ಸಂಗ್ರಾಮ ಕಾಲಘಟ್ಟದ ಹಿಂದುತ್ವ ಪ್ರತಿಪಾದಕ ವಿನಾಯಕ ಸಾವರ್ಕರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಹೂಡಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜಾಮೀನು ಬಾಂಡ್ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಲು ಕೋರಿ ದೂರುದಾರ ಸಾತ್ಯಕಿ ಸಾವರ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ.
ಅರ್ಜಿಯನ್ನು ತಿರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಮೋಲ್ ಶ್ರೀರಾಮ್ ಶಿಂಧೆ , ರಾಹುಲ್ ಅವರು ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿಯ ಜೊತೆಗೆ ಜಾಮೀನು ಪಡೆದಿದ್ದಾರೆ ಎಂದು ತಿಳಿಸಿದರು.
"ಇಬ್ಬರೂ ಕಕ್ಷಿದಾರರ ಪರ ವಕೀಲರ ವಾದ ಆಲಿಸಿದ ನಂತರ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿದುಕೊಂಡಿದೆ. ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ಅವರಿಗೆ ಶಾಶ್ವತ ವಿನಾಯಿತಿ ನೀಡಲಾಗಿದೆ. ಆರೋಪಿಯ ಜಾಮೀನು ಬಾಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಕಷ್ಟು ಕಾರಣಗಳಿಲ್ಲ" ಎಂದು ನ್ಯಾಯಾಲಯ ವಿವರಿಸಿದೆ. ರಾಹುಲ್ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂತಲೂ ಅದು ನುಡಿದಿದೆ.
ದೂರುದಾರರು ಜಾಮೀನನ್ನು ಪ್ರಶ್ನಿಸಲು ಬಯಸಿದರೆ, ಸಿಆರ್‌ಪಿಸಿ ಸೆಕ್ಷನ್ 439(2) ರ ಅಡಿಯಲ್ಲಿ ಸೂಕ್ತ ಮಾರ್ಗ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್ ಅವರು ವಿನಾಯಕ ಸಾವರ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅರ್ಜಿ ಸಲ್ಲಿಸಿದ್ದರು.
[ಆದೇಶದ ಪ್ರತಿ]