ಚುನಾವಣಾ ಬಾಂಡ್‌, ಎಸ್‌ಬಿಐ ಹಾಗೂ ಸುಪ್ರೀಂ ಕೋರ್ಟ್ 
ಸುದ್ದಿಗಳು

ಚುನಾವಣಾ ಬಾಂಡ್‌: ಇಸಿಐಗೆ ಮಾಹಿತಿ ಸಲ್ಲಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಎಸ್‌ಬಿಐ

ಚುನಾವಣಾ ಬಾಂಡ್‌ ವಿವರ ಒದಗಿಸಲು ಗಡುವು ವಿಸ್ತರಿಸಬೇಕೆಂದು ಕೋರಿ ಎಸ್‌ಬಿಐ ಸಲ್ಲಿಸಿದ್ದ ಮನವಿಯನ್ನು ಸೋಮವಾರ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಮಾರ್ಚ್ 12ರೊಳಗೆ ತನ್ನ ನಿರ್ದೇಶನ ಪಾಲಿಸುವಂತೆ ಆದೇಶಿಸಿತ್ತು.

Bar & Bench

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಪಾಲಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಖರಾ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. 

ಚುನಾವಣಾ ಬಾಂಡ್‌ ವಿವರ ಒದಗಿಸಲು ಗಡುವು ವಿಸ್ತರಿಸಬೇಕೆಂದು ಕೋರಿ ಎಸ್‌ಬಿಐ ಸಲ್ಲಿಸಿದ್ದ ಮನವಿಯನ್ನು ಸೋಮವಾರ ವಜಾಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಮಾರ್ಚ್ 12ರೊಳಗೆ ತನ್ನ ನಿರ್ದೇಶನ ಪಾಲಿಸುವಂತೆ ಆದೇಶಿಸಿತ್ತು.

ಚುನಾವಣಾ ಬಾಂಡ್‌ ವಿವರ ಒದಗಿಸಲು ತಾನು ನಿಗದಿಪಡಿಸಿದ್ದ ಗಡುವು ವಿಸ್ತರಿಸುವಂತೆ ಎಸ್‌ಬಿಐ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 11ರಂದು ವಜಾಗೊಳಿಸಿತ್ತು. ತನ್ನ ಸೂಚನೆ ಪಾಲಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಕೂಡ ಪೀಠ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿತ್ತು. ಹೀಗಾಗಿ ಆದೇಶ ಪಾಲನೆ ಕುರಿತಾದ ಅಫಿಡವಿಟ್‌ ಸಲ್ಲಿಸುವಂತೆ ಬ್ಯಾಂಕ್‌ ಅಧ್ಯಕ್ಷರಿಗೆ ಅದು ತಾಕೀತು ಮಾಡಿತ್ತು.

ನಿನ್ನೆ ಭಾರತೀಯ ಚುನಾವಣಾ ಆಯೋಗಕ್ಕೆ ಮಾಹಿತಿ ಒದಗಿಸಿದ್ದ ಎಸ್‌ಬಿಐ ಇಂದು ಈ ಸಂಬಂಧ ಅನುಪಾಲನಾ ಅಫಿಡವಿಟ್‌ ಸಲ್ಲಿಸಿದೆ.

ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಎಸ್‌ಬಿಐ ಅಧ್ಯಕ್ಷ

ಪ್ರತಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಿನಾಂಕ, ಖರೀದಿದಾರರ ಹೆಸರು ಹಾಗೂ ಖರೀದಿಸಿದ ಬಾಂಡ್‌ ಮೌಲ್ಯವನ್ನು ಚುನಾವಣಾ ಆಯೋಗಕ್ಕೆ ಒದಗಿಸಲಾದ ಮಾಹಿತಿಯಲ್ಲಿ ನೀಡಲಾಗಿದೆ ಎಂದು ಅದು ತನ್ನ ಅಫಿಡವಿಟ್‌ನಲ್ಲಿ ವಿವರಿಸಿದೆ .

ಅಲ್ಲದೆ, ಚುನಾವಣಾ ಬಾಂಡ್‌ಗಳ ನಗದೀಕರಣ ದಿನಾಂಕ, ದೇಣಿಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರು ಹಾಗೂ ಆ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಇದು ಒಳಗೊಂಡಿದೆ. 

ಏಪ್ರಿಲ್ 1, 2019 ರಿಂದ ಫೆಬ್ರವರಿ 15, 2024ರ ನಡುವೆ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ. ಈ ಪೈಕಿ 22,030 ಬಾಂಡ್‌ಗಳನ್ನು ನಗದೀಕರಿಸಲಾಗಿದೆ.

ಹಿನ್ನೆಲೆ

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಫೆಬ್ರವರಿ 15ರಂದು ಚುನಾವಣಾ ಬಾಂಡ್‌ ಯೋಜನೆ ರದ್ದುಗೊಳಿಸಿದ್ದಲ್ಲದೆ 2019ರ ಏಪ್ರಿಲ್‌ 12ರಿಂದ ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ದೇಣಿಗೆಯ ಮಾಹಿತಿಯನ್ನು ಇಸಿಐಗೆ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅಲ್ಲದೇ, ರಾಜಕೀಯ ಪಕ್ಷಗಳು ಪ್ರತಿ ಚುನಾವಣಾ ಬಾಂಡ್‌ ಅನ್ನು ನಗದು ಮಾಡಿಕೊಂಡಿರುವ ವಿವರವನ್ನು ಮಾರ್ಚ್‌ 6ರ ವೇಳೆಗೆ ಇಸಿಐಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

ಪ್ರತಿ ಚುನಾವಣಾ ಬಾಂಡ್‌ ಖರೀದಿಸಿರುವ ವಿವರ; ಅದನ್ನು ಖರೀದಿಸಿರುವವರು ಯಾರು; ಎಷ್ಟು ಮೊತ್ತದ ಚುನಾವಣಾ ಬಾಂಡ್‌; ಚುನಾವಣಾ ಬಾಂಡ್‌ ಅನ್ನು ರಾಜಕೀಯ ಪಕ್ಷಗಳು ಎಂದು ನಗದೀಕರಿಸಿಕೊಂಡಿವೆ ಎಂಬ ಮಾಹಿತಿಯನ್ನು ಎಸ್‌ಬಿಐ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಎಸ್‌ಬಿಐನಿಂದ ಮಾಹಿತಿ ಪಡೆದ ಒಂದು ವಾರದಲ್ಲಿ ಇಸಿಐ ತನ್ನ ಜಾಲತಾಣದಲ್ಲಿ ಅದನ್ನು ಪ್ರಕಟಿಸಬೇಕು ಎಂದು ಹೇಳಿತ್ತು.