ಸುದ್ದಿಗಳು

ಯುಜಿಸಿ ನಿಯಮಾವಳಿಯಂತೆ ಸೆಪ್ಟೆಂಬರ್ 30ರ ಒಳಗೆ ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Bar & Bench

ಕೋವಿಡ್ ಸಾಂಕ್ರಾಮಿಕತೆಯ ನಡುವೆಯೂ ಸೆಪ್ಟೆಂಬರ್ 30ರೊಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಆದೇಶ ಕಾಯ್ದಿರಿಸಿದೆ. ಪ್ರತಿವಾದಿಸಿದ ಎಲ್ಲರಿಗೂ ಮೂರು ದಿನಗಳೊಳಗೆ ಲಿಖಿತ ದಾಖಲೆ ಸಲ್ಲಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಹಾಗೂ ಎಂ ಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿವಿಧ ರಾಜ್ಯಗಳ ವಕೀಲರು ಸುದೀರ್ಘ ವಾದ ಮಂಡಿಸಿದರು.

ಯುಜಿಸಿ ನಿಯಮಾವಳಿಗೆ ತಗಾದೆ ಎತ್ತಿದ ಹಿರಿಯ ವಕೀಲ ಅರವಿಂದ್ ದಾತಾರ್, “ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ ಯುಜಿಸಿ ಗುಣಮಟ್ಟ ನಿರ್ಧರಿಸಬಹುದೇ ವಿನಾ ಪರೀಕ್ಷೆಗಳನ್ನು ನಡೆಸುವ ವಿಚಾರ ಅದರ ವ್ಯಾಪ್ತಿಗೆ ಬರುವುದಿಲ್ಲ” ಎಂದರು.

“ವಿದ್ಯಾರ್ಥಿಗಳ ಕಲ್ಯಾಣವೇ ಇಂದಿನ ಪ್ರಮುಖ ವಿಚಾರವಾಗಿದೆ. ಪರೀಕ್ಷೆ ನಡೆಸದೇ ಪದವಿ ಪ್ರದಾನ ಮಾಡಬಾರದು ಎಂದು ಯುಜಿಸಿ ಹೇಳಬಹುದೇ ವಿನಾ ಶತಾಯಗತಾಯ ಸೆಪ್ಟೆಂಬರ್ 30ರೊಳಗೆ ಪರೀಕ್ಷೆ ನಡೆಸಬೇಕು ಎಂದು ಯುಜಿಸಿ ನಿರ್ದೇಶಿಸುವಂತಿಲ್ಲ. ಜುಲೈ 6ರಂದು ಯುಜಿಸಿ ಹೊರಡಿಸಿರುವ ಸುತ್ತೋಲೆ ಪ್ರಶ್ನಾರ್ಹವಾಗಿದ್ದು, ಅದನ್ನು ವಜಾಗೊಳಿಸಬೇಕು”
ಅರವಿಂದ್ ದಾತಾರ್, ಹಿರಿಯ ವಕೀಲ

“ಕೋವಿಡ್ ಸಾಂಕ್ರಾಮಿಕತೆಯು ದೇಶದ ವಿವಿಧ ಭಾಗಗಳಲ್ಲಿ ಭಾರಿ ಸಂಕಷ್ಟ ಸೃಷ್ಟಿಸಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. 15 ಸಾವಿರ ಕೊರೊನಾ ಪ್ರಕರಣಗಳು ವರದಿಯಾದಾಗ ಪರೀಕ್ಷೆ ನಡೆಸಲಾಗಿಲ್ಲ ಎಂದಾದರೆ ಈಗ ಪರೀಕ್ಷೆ ನಡೆಸುವುದು ಹೇಗೆ?” ಎನ್ನುವ ಮೂಲಕ ಕೋರ್ಟ್ ಗಮನಸೆಳೆದರು.

“ವಿದ್ಯಾರ್ಥಿಗಳ ಕಲ್ಯಾಣವನ್ನು ಸಂಸ್ಥೆಗಳು ನಿರ್ಧರಿಸುತ್ತವೆಯೇ ವಿನಾ ವಿದ್ಯಾರ್ಥಿಗಳಲ್ಲ. ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಡಬಹುದೆ?”
ಅಶೋಕ್ ಭೂಷಣ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಒಡಿಶಾ ಮತ್ತು ಪಶ್ಚಿಮ ಬಂಗಾಳ ನೆರೆ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿವೆ. ಇದನ್ನೇ ಮುಂದು ಮಾಡಿದ ಉಭಯ ರಾಜ್ಯಗಳ ವಕೀಲರು, ರಾಜ್ಯ ಸರ್ಕಾರಗಳು ಅತ್ಯಂತ ಸಂಕಷ್ಟಕ್ಕೆ ಸಿಲುಕಿವೆ. ಇಂಥ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಸ್ಥಿತಿಯಲ್ಲಿ ರಾಜ್ಯಗಳಿಲ್ಲ ಎಂದು ಹೇಳಿದ್ದಾರೆ.

“ಅಂತಿಮ ವರ್ಷ ಪದವಿ ಪ್ರಧಾನ ವರ್ಷವಾಗಿರುವುದರಿಂದ ಪರೀಕ್ಷೆ ಕೈಬಿಡಲಾಗದು” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠದ ಮುಂದೆ ವಾದಿಸಿದರು.