Reliance ADAG 
ಸುದ್ದಿಗಳು

ಅನಿಲ್ ಅಂಬಾನಿ ವಿರುದ್ಧದ ಐಬಿಸಿ ಪ್ರಕ್ರಿಯೆಗೆ ತಡೆ ನೀಡಿದ್ದ ಹೈಕೋರ್ಟ್ ಆದೇಶ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಕಾರ

ದೆಹಲಿ ಹೈಕೋರ್ಟ್ ನೀಡಿರುವ ತಡೆ ಆದೇಶದ ಮಾರ್ಪಾಡು ಕೋರುವ ಸ್ವಾತಂತ್ರ್ಯ ಭಾರತೀಯ ಸ್ಟೇಟ್ ಬ್ಯಾಂಕ್‌ ಗೆ ಇದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧದ ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಗೆ ನೀಡಿದ್ದ ತಡೆ ಆದೇಶವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಇದರಿಂದ ಉದ್ಯಮಿ ಅನಿಲ್ ಅಂಬಾನಿ ನಿರಾಳರಾಗಿದ್ದಾರೆ.

ಅಂಬಾನಿ ಸಮೂಹದ ಎರಡು ಸಂಸ್ಥೆಗಳಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ ಬಿಐ) ಮಂಜೂರು ಮಾಡಿದ್ದ ₹1,200 ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಐಬಿಸಿ ಪ್ರಕ್ರಿಯೆ ನಡೆಸುವುದಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಕಳೆದ ಆಗಸ್ಟ್ ನಲ್ಲಿ ಎಸ್‌ಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂಬಾನಿ ನೀಡಿದ್ದ ವೈಯಕ್ತಿಕ ಭದ್ರತೆಯನ್ನು ಎಸ್ ಬಿಐ ಪ್ರಸ್ತಾಪಿಸಿತ್ತು.

ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಎಸ್‌ ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ತಡೆ ಆದೇಶವನ್ನು ಹಿಂಪಡೆಯಲು ನಿರಾಕರಿಸಿತು. ತನ್ನ ಆದೇಶದ ನವೀಕರಣ ಮಾಡುವಂತೆ ಎಸ್‌ಬಿಐ ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದೆ. ಅಕ್ಟೋಬರ್ 6ರಂದು ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರಜನೀಶ್ ಭಟ್ನಾಗರ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠವು ಅನಿಲ್ ಅಂಬಾನಿ ಅವರ ಮನವಿಯನ್ನು ಪುರಸ್ಕರಿಸಿ ತಡೆ ಆದೇಶ ನೀಡಿತ್ತು. ಮನವಿಗೆ ಸಂಬಂಧಿಸಿದಂತೆ ಎಸ್‌ಬಿಐ, ಕೇಂದ್ರ ಸರ್ಕಾರ ಮತ್ತು ಭಾರತೀಯ ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಮಂಡಳಿಗೆ ನೋಟಿಸ್ ಜಾರಿಗೊಳಿಸಿತ್ತು.