Supreme Court
Supreme Court  
ಸುದ್ದಿಗಳು

ವಿಚ್ಛೇದಿತ ಪುತ್ರಿಗೆ ಇಲ್ಲ ಅನುಕಂಪದ ಉದ್ಯೋಗ: ಏನು ಹೇಳುತ್ತದೆ ಸುಪ್ರೀಂಕೋರ್ಟ್ ತೀರ್ಪು?

Bar & Bench

ಸರ್ಕಾರಿ ನೌಕರರು ಮರಣ ಹೊಂದಿದ ಬಳಿಕ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದರೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ದೊರೆಯುತ್ತದೆಯೇ? ಸಾಧ್ಯವಿಲ್ಲ ಎಂದಿದೆ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು. ಆ ಮೂಲಕ ಪೋಷಕರ ನಿಧನಾನಂತರ ಅನುಕಂಪ ಆಧಾರಿತ ಉದ್ಯೋಗವನ್ನು ಪಡೆಯುವ ಸಲುವಾಗಿ ಸಮ್ಮತಿ ಮೂಲಕ ವಿಚ್ಛೇದನ ಪಡೆಯುವ ಪ್ರಕರಣಗಳಿಗೆ ಲಗಾಮು ಹಾಕಲು ಮುಂದಾಗಿದೆ.

ಮಂಡ್ಯ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಡಿ. ಪಿ ಭಾಗ್ಯಮ್ಮ ಅವರ ಪುತ್ತಿ ವಿ ಸೌಮ್ಯಶ್ರೀ ಅನುಕಂಪ ಆಧಾರದಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ನ್ಯಾ. ಎಂ ಆರ್‌ ಶಾ ಮತ್ತು ಅನಿರುದ್ಧ ಬೋಸ್‌ ಅವರಿದ್ದ ಪೀಠ ಇತ್ತೀಚೆಗೆ ತೀರ್ಪು ನೀಡಿದೆ. ಸೌಮ್ಯಶ್ರೀ ಅವರಿಗೆ ಉದ್ಯೋಗ ನೀಡುವಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಸೂಚನೆ ಪ್ರಶ್ನಿಸಿ ಕರ್ನಾಟಕ ಸರ್ಕಾರ ಖಜಾನೆ ನಿರ್ದೇಶಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾಗ್ಯಮ್ಮ ಅವರು 2012ರ ಮಾರ್ಚ್‌ನಲ್ಲಿ ನಿಧನರಾಗಿದ್ಗರು. ಆದರೆ ಸೌಮ್ಯಶ್ರೀ ಅವರು ಅದೇ ವರ್ಷ ಸೆ. 12ರಂದು ಪತಿಯ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಅವರ ವಿಚ್ಛೇದನ ಮಂಡ್ಯದ ನ್ಯಾಯಾಲಯದಲ್ಲಿ 2013ರ ಮಾರ್ಚ್‌ನಲ್ಲಿ ಊರ್ಜಿತಗೊಂಡಿತ್ತು. ಇದಾದ ಮರುದಿನವೇ ಅಂದರೆ 2013 ಮಾರ್ಚ್‌ 21ರಂದು ಅವರು ಅನುಕಂಪ ಆಧಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಈ ಕೆಳಗಿನ ನೆಲೆಗಳಲ್ಲಿ ಉದ್ಯೋಗಿ ಮರಣದ ಬಳಿಕ ಪುತ್ರಿ ವಿಚ್ಛೇದನ ಪಡೆದು ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಸೇರಲು ಅವಕಾಶವನ್ನು ನಿರಾಕರಿಸಿದೆ:

  • ಅನುಕಂಪ ಆಧಾರಿತ ನೇಮಕಾತಿ ಕೇವಲ ಯೋಜನೆ ಮತ್ತು ನೀತಿಗೆ ಅನುಗುಣವಾಗಿರುತ್ತದೆ ಎಂದು ಎನ್‌ ಸಿ ಸಂತೋಷ್‌ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಈ ಪ್ರಕರಣದಲ್ಲಿ ಪರಿಗಣಿಸಬೇಕಾಗುತ್ತದೆ.

  • ʼವಿಚ್ಛೇದಿತ ಪುತ್ರಿʼ ಎಂಬ ನೆಲೆಯಲ್ಲಿ ನೇಮಕಾತಿಗಾಗಿ ಪ್ರತಿವಾದಿಯಾದ (ಸೌಮ್ಯಶ್ರೀ) ಅವರನ್ನು ಪರಿಗಣಿಸುವಂತೆ ಮೇಲ್ಮನವಿದಾರರಿಗೆ ನಿರ್ದೇಶಿಸುವ ಮೂಲಕ (ಕರ್ನಾಟಕ) ಹೈಕೋರ್ಟ್‌-1996ರ ನಿಯಮಾವಳಿಗಳ 2 ಮತ್ತು 3ನೇ ನಿಯಮಗಳನ್ನು ಮೀರಿದೆ.

  • ಈ ನಿಯಮಗಳನ್ನು ಗಮನಿಸಿದರೆ ಉದ್ಯೋಗಿಯನ್ನೇ ಅವಲಂಬಿಸಿದ್ದ ʼಅವಿವಾಹಿತʼ ಅಥವಾ ʼವಿಧವೆ ಮಗಳಿಗೆʼ ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬಹುದಾಗಿದೆ.

  • ಕರ್ನಾಟಕ ನಾಗರಿಕ ಸೇವಾ (ಅನುಕಂಪ ಆಧಾರಿತ ನೇಮಕಾತಿ) ನಿಯಮಗಳು-1996ರ ಪ್ರಕಾರ ಸರ್ಕಾರಿ ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡಲು ಅವಕಾಶವಿಲ್ಲ.

  • ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ 2021ರಲ್ಲಿ ತಿದ್ದುಪಡಿ ಮಾಡಲಾಗಿದ್ದು ವಿಚ್ಛೇದಿತ ಪುತ್ರಿಯನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ ಉದ್ಯೋಗಿ ಸಾವಿಗೀಡಾದ ನಂತರ ಅವರ ಮಗಳು ವಿಚ್ಛೇದನ ಪಡೆದಿದ್ದಲ್ಲಿ ಇದಕ್ಕೆ ಅವಕಾಶ ನೀಡಲಾಗದು.

  • ಈ ಅಗತ್ಯ ಅಂಶಗಳ ಗಮನಿಸುವ ಜೊತೆಗೆ ಹೈಕೋರ್ಟ್‌, ಮೃತ ಉದ್ಯೋಗಿ (ಭಾಗ್ಯಮ್ಮ) 25.03.2012 ರಂದು ನಿಧನರಾದರು. ಆ ಸಮಯದಲ್ಲಿ ಮೂಲ ರಿಟ್‌ ಅರ್ಜಿದಾರರು (ಸೌಮ್ಯಶ್ರೀ) ವಿವಾಹಿತ ಪುತ್ರಿಯಾಗಿದ್ದರು ಎಂಬ ಅಂಶವನ್ನು ಪರಿಗಣಿಸಬೇಕಿತ್ತು. ಉದ್ಯೋಗಿ ಮೃತಪಟ್ಟ ಕೂಡಲೇ ವಿಚ್ಛೇದನ ಪ್ರಕ್ರಿಯೆಗೆ ಪ್ರತಿವಾದಿ ಮುಂದಾದರು. ಪರಸ್ಪರ ಸಮ್ಮತಿ ಆಧಾರದಲ್ಲಿ ಮಂಡ್ಯದ ನ್ಯಾಯಾಲಯ ವಿಚ್ಛೇದನವನ್ನು ಊರ್ಜಿತಗೊಳಿಸಿತು. ಅದಾದ ಮರುದಿನವೇ ಪ್ರತಿವಾದಿ ಅನುಕಂಪದ ನೆಲೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರು.

  • ದಿನಾಂಕ ಹಾಗೂ ಘಟನೆಗಳ ಕಾಲಾನುಕ್ರಮವನ್ನು ಗಮನಿಸಿದರೆ ಉದ್ಯೋಗ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಾಗಿದೆ ಎಂದು ತಿಳಿದುಬರುತ್ತದೆ. ಇಲ್ಲದೆ ಹೋದರೆ ವಿವಾಹಿತ ಮಗಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಪ್ರತಿವಾದಿಯ ಅರ್ಜಿಯನ್ನು ಪರಿಗಣಿಸುವಂತೆ ಮೇಲ್ಮನವಿದಾರರಿಗೆ ಸೂಚಿಸಬಾರದಿತ್ತು.

  • ಇದಲ್ಲದೆ ಉದ್ಯೋಗಿ ಮೃತಪಟ್ಟ ಸಮಯದಲ್ಲಿ ಪ್ರತಿವಾದಿ ತನ್ನ ಪತಿಯ ಜೊತೆ ಜೀವನ ನಡೆಸುತ್ತಿದ್ದರು ಎಂಬುದನ್ನಾದರೂ ಹೈಕೋರ್ಟ್‌ ಗಮನಿಸಬೇಕಿತ್ತು. ಆದ್ದರಿಂದ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಪ್ರತಿವಾದಿ ವಿವಾಹಿತ ಪುತ್ರಿಯಾಗಿದ್ದರು ಮತ್ತು 1996 ರನಿಯಮ 2ರ ಅಡಿಯಲ್ಲಿವ್ಯಾಖ್ಯಾನಿಸಿದಂತೆ 'ಅವಲಂಬಿತ'ರು ಎಂದು ಆಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ.

  • ʼಅವಿವಾಹಿತ ಮಗಳುʼ ಅಥವಾ ʼವಿಧವೆ ಪುತ್ರಿʼ ಎಂಬ ನೆಲೆಯಲ್ಲಿ ʼವಿಚ್ಛೇದಿತ ಮಗಳನ್ನುʼ ಪರಿಗಣಿಸುವಾಗಲೂ ಕೂಡ ಉದ್ಯೋಗಿ ಸಾವನ್ನಪ್ಪಿದ ಬಳಿಕ ಪ್ರತಿವಾದಿಯು ವಿಚ್ಛೇದನ ಪಡೆದಿದ್ದರಿಂದ ಈ ಪ್ರಕರಣದಲ್ಲಿ ʼವಿಚ್ಛೇದಿತ ಮಗಳುʼ ಎಂಬುದಕ್ಕೆ ಪ್ರತಿವಾದಿ ಅರ್ಹರಾಗಿರುವುದಿಲ್ಲ.

  • ಈ ಮೇಲಿನ ಕಾರಣಗಳಿಂದಾಗಿ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಆ ಮೂಲಕ ಹೈಕೋರ್ಟ್‌ ನೀಡಿದ್ದ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಿ, ಬದಿಗೆ ಇರಿಸಲಾಗಿದೆ. ಅಂತೆಯೇ ಹೈಕೋರ್ಟ್‌ ಮುಂದೆ ಇರುವ ರಿಟ್‌ ಅರ್ಜಿಯನ್ನು ವಜಾಗೊಳಿಸಲಾಗಿದೆ. ಆದರೆ ದಂಡ ವಿಧಿಸುವ ಸಂಬಂಧ ಯಾವುದೇ ಆದೇಶ ನೀಡುವುದಿಲ್ಲ.

ರಾಜ್ಯ ಸರ್ಕಾರದ ಪರವಾಗಿ ವಕೀಲ ವಿ ಎನ್‌ ರಘುಪತಿ ಅವರು ವಾದ ಮಂಡಿಸಿದ್ದರು. ಪ್ರತಿವಾದಿ ಸೌಮ್ಯಶ್ರೀ ಅವರ ಪರವಾಗಿ ವಕೀಲ ಮೊಹಮ್ಮದ್‌ ಇರ್ಷಾದ್‌ ಹನೀಫ್‌ ವಾದಿಸಿದ್ದರು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

CIVIL APPEAL NO. 5122 OF 2021.pdf
Preview