Justice (Retd.) Gopala Gowda  
ಸುದ್ದಿಗಳು

ಸುಪ್ರೀಂಕೋರ್ಟ್ ವಕೀಲರ ಸಂಘ ʼಸುಪ್ರೀಂʼ ಅಲ್ಲ: ನ್ಯಾ. ವಿ ಗೋಪಾಲಗೌಡ

ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ಮೋಹನ್‌ ಕಾತರಕಿ ಮಾತನಾಡಿ "1961ರ ವಕೀಲರ ಕಾಯಿದೆಯನ್ನು ಜಾರಿಗೆ ತಂದ ಬಳಿಕ ಸುಪ್ರೀಂಕೋರ್ಟ್‌ ವಕೀಲರು, ಹೈಕೋರ್ಟ್‌ ವಕೀಲರು ಅಥವಾ ವಿಚಾರಣಾ ನ್ಯಾಯಾಲಯಗಳ ವಕೀಲರು ಎಂಬ ಪರಿಕಲ್ಪನೆ ಇಲ್ಲ" ಎಂದರು.

Ramesh DK

“ಸುಪ್ರೀಂಕೋರ್ಟ್‌ ವಕೀಲರ ಸಂಘ ದೇಶದ ಉಳಿದ ವಕೀಲರ ಸಂಘಗಳಿಗಿಂತ ಸುಪ್ರೀಂ ಅಲ್ಲ. ಪ್ರತಿಯೊಂದು ಸಂಘವೂ ಸ್ವತಂತ್ರ. ಸುಪ್ರೀಂಕೋರ್ಟ್‌ ರೀತಿಯೇ ಹೈಕೋರ್ಟ್‌ಗಳು ಕೂಡ ಸಾಂವಿಧಾನಿಕ ಪೀಠಗಳು. ವಕೀಲರು ವಕೀಲರಷ್ಟೇ… ಹೀಗಾಗಿ ಹೈಕೋರ್ಟ್‌ ವಕೀಲರಿಗಿಂತ ಸುಪ್ರೀಂಕೋರ್ಟ್‌ ವಕೀಲರು ವೃತ್ತಿಪರವಾಗಿ ಹೆಚ್ಚು ಅರ್ಹರು ಎಂಬ ಎಸ್‌ಸಿಬಿಎ ವಾದ ಒಪ್ಪುವಂತಹದ್ದಲ್ಲ” ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ತಿಳಿಸಿದರು.

“ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಸುಪ್ರೀಂಕೋರ್ಟ್‌ ವಕೀಲರನ್ನು ಪರಿಗಣಿಸುವ ಪ್ರಸ್ತಾವನೆ. ಹೈಕೋರ್ಟ್‌ ಕೊಲಿಜಿಯಂ ವ್ಯವಸ್ಥೆಗೆ ಅಡ್ಡಿ” ಎಂಬ ವಿಷಯವಾಗಿ ಬೆಂಗಳೂರಿನ ದಕ್ಷಾ ಲೀಗಲ್‌ ಚಾರಿಟಬಲ್‌ ಟ್ರಸ್ಟ್‌ ಶುಕ್ರವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ಸುಪ್ರೀಂ ಕೋರ್ಟ್‌ ವಕೀಲರು ಹೈಕೋರ್ಟ್‌ ವಕೀಲರಿಗಿಂತ ಹೆಚ್ಚು ಅರ್ಹರಾಗಿದ್ದು ಅವರನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗಳಿಗೆ ಪರಿಗಣಿಸಬೇಕು ಎನ್ನುವ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ವೆಬಿನಾರ್‌ ಮಹತ್ವ ಪಡೆದಿತ್ತು.

“ಸುಪ್ರೀಂಕೋರ್ಟ್‌ನಲ್ಲಿ ಒಳ್ಳೆಯ ವಕೀಲರು ಇರಬಹುದು. ಆದರೆ ತಾವು ಹೈಕೋರ್ಟ್‌ ವಕೀಲರಿಗಿಂತ ಹೆಚ್ಚು ಅರ್ಹರು ಎಂದು ಅವರು ಹಕ್ಕು ಸಾಧಿಸಲಾಗದು. ಸಿವಿಲ್‌, ಕ್ರಿಮಿನಲ್‌, ಕಂಪೆನಿ, ಕಾರ್ಮಿಕ, ತೆರಿಗೆ ಕಾನೂನು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅನುಭವ ನುರಿತ ವಕೀಲರು ಹೈಕೋರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿಚಾರಣೆ (ಟ್ರಯಲ್‌) ನಡೆಸಿದ ಅನುಭವ ಇರುತ್ತದೆ. ಅವರು ನಿಜವಾದ ವಕೀಲರುಗಳು. ಬೆಂಗಳೂರಿನಂತಹ ನಗರಗಳಲ್ಲಿ ವಿಚಾರಣಾ ನ್ಯಾಯಾಲಯಗಳ ಶೇ 20ರಷ್ಟು ನ್ಯಾಯವಾದಿಗಳು ಹೈಕೋರ್ಟ್‌ಗಳಲ್ಲೂ ವಾದ ಮಂಡಿಸುತ್ತಾರೆ” ಎಂದು ನ್ಯಾ. ವಿ ಗೋಪಾಲಗೌಡ ತಿಳಿಸಿದರು.

“ಸ್ವತಃ ನಾನು ಕರ್ನಾಟಕದ 32 ನ್ಯಾಯಾಲಯಗಳಲ್ಲಿ ವಕೀಲನಾಗಿ ಕೆಲಸ ಮಾಡಿದ್ದೇನೆ. ಆ ರೀತಿ ಕೆಲಸ ಮಾಡುವ ಅನೇಕ ವಕೀಲರು ಇದ್ದಾರೆ. ಅನೇಕ ಯುವ ವಕೀಲರು ನಮ್ಮಂತಹವರಿಗೆ ಪಾಠ ಮಾಡುತ್ತಿದ್ದಾರೆ. ನಾವು ಅವರಿಂದ ಕಲಿಯುತ್ತಿದ್ದೇವೆ. ಅಂತಹವರನ್ನು ಉತ್ತಮ ವಕೀಲರಲ್ಲ ಎಂದು ಯಾರು ಹೇಳುತ್ತಾರೆ” ಎಂಬುದಾಗಿ ಪ್ರಶ್ನಿಸಿದ ಅವರು, “ಸಾವಿರಾರು ಅತ್ಯುತ್ತಮ ಮಹಿಳಾ ವಕೀಲರು ಕೂಡ ನ್ಯಾಯಾಲಯಗಳಲ್ಲಿ ದುಡಿಯುತ್ತಿದ್ದಾರೆ ಇವರನ್ನೆಲ್ಲಾ ಸುಪ್ರೀಂಕೋರ್ಟ್‌ನಿಂದ ಆಮದು ಮಾಡಿಕೊಂಡಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಎಸ್‌ಸಿಬಿಎ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರ ಹೇಳಿಕೆ ಖಂಡಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌ ಬಸವರಾಜು ಅವರು ಬರೆದಿರುವ ಪತ್ರವನ್ನು ಪ್ರಸ್ತಾಪಿಸಿದ ಅವರು ಬಸವರಾಜು ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು.

ಎಸ್‌ಸಿಬಿಎ ಬರೆದಿರುವ ಪತ್ರದಿಂದಾಗಿ ಸಂವಿಧಾನದ 272ನೇ ವಿಧಿ ಸೇರಿದಂತೆ ವಿವಿಧ ವಿಧಿಗಳು ಉಲ್ಲಂಘನೆಯಾಗುತ್ತವೆ. ಹೀಗಾಗಿ ಅದು ಅಸಾಂವಿಧಾನಿಕ. ಒಂದು ವೇಳೆ ಎಸ್‌ಸಿಬಿಎ ಸಲಹೆಗಳನ್ನು ಅಂಗೀಕರಿಸಿದ್ದರೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಆ ನಿರ್ಧಾರವನ್ನು ಮರುಪರಿಶೀಲಿಸಬೇಕು” ಎಂದು ಮನವಿ ಮಾಡಿದರು.

ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ಮೋಹನ್‌ ಕಾತರಕಿ ಮಾತನಾಡಿ, “ಎಸ್‌ಸಿಬಿಎ ನಿರ್ಣಯವನ್ನು ಅದರಲ್ಲಿಯೂ ವಕೀಲರ ಅರ್ಹತೆ ಕುರಿತಾದ ಅದರ ಅಧ್ಯಕ್ಷರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅದು ಮಾತನಾಡುವ ವಿಧಾನವಲ್ಲ” ಎಂದರು.

“ನನ್ನ ಪ್ರಕಾರ 1961ರ ವಕೀಲರ ಕಾಯಿದೆಯನ್ನು ಜಾರಿಗೆ ತಂದ ಬಳಿಕ ಸುಪ್ರೀಂಕೋರ್ಟ್‌ ವಕೀಲರು, ಹೈಕೋರ್ಟ್‌ ವಕೀಲರು ಅಥವಾ ವಿಚಾರಣಾ ನ್ಯಾಯಾಲಯಗಳ ವಕೀಲರು ಎಂಬ ಪರಿಕಲ್ಪನೆ ಅಸ್ತಿತ್ವದಲ್ಲಿ ಇಲ್ಲ. ಎಲ್ಲಾ ವಕೀಲರು ಒಂದೇ. ಅದಕ್ಕೂ ಮೊದಲು ಸಾಲಿಸಿಟರ್‌, ಬ್ಯಾರಿಸ್ಟರ್‌, ಹೈಕೋರ್ಟ್‌ ಪ್ಲೀಡರ್ಸ್‌, ಪ್ಲೀಡರ್ಸ್‌ ಇತ್ಯಾದಿ ವರ್ಗಗಳಿದ್ದವು. ಕಾಯಿದೆ ಬಂದ ನಂತರ ಅವೆಲ್ಲಾ ಹೊರಟು ಹೋದವು” ಎಂದು ತಿಳಿಸಿದರು.

ಕೆಎಸ್‌ಬಿಸಿ ಅಧ್ಯಕ್ಷ ಶ್ರೀನಿವಾಸ್‌ ಬಾಬು, ಎಐಎಲ್‌ಯು ಸಂಘಟನೆಯ ಕೋಟೇಶ್ವರ ರಾವ್‌, ಕರ್ನಾಟಕ ಕಿರಿಯ ವಕೀಲರ ಸಂಘದ ಅಧ್ಯಕ್ಷ ಪಿ ಅರವಿಂದ ಕಾಮತ್‌ ಸೇರಿದಂತೆ ದೇಶದ ನಾನಾಭಾಗಗಳ ಆಸಕ್ತರು ವೆಬಿನಾರ್‌ನಲ್ಲಿ ಪಾಲ್ಗೊಂಡರು.