Menstrual leave  
ಸುದ್ದಿಗಳು

ಸ್ಯಾನಿಟರಿ ಪ್ಯಾಡ್ ಛಾಯಾಚಿತ್ರ ಪ್ರಕರಣ: ಮಹಿಳೆಯರ ಘನತೆ ಎತ್ತಿಹಿಡಿಯುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಸ್‌ಸಿಬಿಎ

ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಮಹಿಳಾ ಸಿಬ್ಬಂದಿ ಮುಟ್ಟು ಸಾಬೀತು ಪಡಿಸಲು, ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್‌ ಛಾಯಾಚಿತ್ರ ನೀಡುವಂತೆ ಕೇಳಿದ್ದ ಅಮಾನವೀಯ ಘಟನೆಯನ್ನು ಅರ್ಜಿ ಪ್ರಸ್ತಾಪಿಸಿದೆ.

Bar & Bench

ದೇಶದ ಸಂಘ ಸಂಸ್ಥೆಗಳಲ್ಲಿ ಸ್ತ್ರೀಯರ ಘನತೆ, ಖಾಸಗಿತನ ಹಾಗೂ ದೈಹಿಕ ಸ್ವಾಯತ್ತತೆಗೆ ತೀವ್ರ ಧಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ವಕೀಲರ ಸಂಘ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಮೂವರು ಸ್ವಚ್ಛತಾ ಮಹಿಳಾ ಸಿಬ್ಬಂದಿ ಮುಟ್ಟು ಸಾಬೀತು ಪಡಿಸಲು, ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್‌ನ ಛಾಯಾಚಿತ್ರ ನೀಡುವಂತೆ ಕೇಳಿದ್ದ  ಅಮಾನವೀಯ ಘಟನೆಯನ್ನು ಅರ್ಜಿ ಪ್ರಸ್ತಾಪಿಸಿದೆ.

ಋತುಚಕ್ರದಿಂದಾಗಿ ವಿಶ್ವವಿದ್ಯಾಲಯದ ಮೂವರು ಮಹಿಳಾ ಸ್ವಚ್ಚತಾ ಕಾರ್ಮಿಕರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರೂ ಆಡಳಿತಾಧಿಕಾರಿಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ಭಾನುವಾರವೂ ಕೆಲಸಕ್ಕೆ ಹಾಜರಿರುವಂತೆ ಸೂಚಿಸಲಾಗಿತ್ತು. ಅಲ್ಲದೆ ಮುಟ್ಟು ಸಾಬೀತಿಗೆ ಸ್ಯಾನಿಟರಿ ಪ್ಯಾಡ್ ಛಾಯಾಚಿತ್ರ ತೆಗೆದು ಕಳಿಸುವಂತೆ ಸೂಚಿಸಿ ಹಾಗೆ ಮಾಡುವವರೆಗೂ ಬಿಡದೆ ಅವಾಚ್ಯವಾಗಿ ನಿಂದಿಸಿ ಒತ್ತಡ ಹೇರಲಾಗಿತ್ತು ಎಂದು ಅಡ್ವೊಕೇಟ್-ಆನ್-ರೆಕಾರ್ಡ್ ಪ್ರಜ್ಞಾ ಬಘೇಲ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಿವರಿಸಲಾಗಿದೆ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಋತುಸ್ರಾವವಾಗಿದೆಯೇ ಎಂಬುದನ್ನು ಪರಿಶೀಲಿಸಲು ಸುಮಾರು 70 ವಿದ್ಯಾರ್ಥಿನಿಯರ ವಿವಸ್ತ್ರರಾಗುವಂತೆ ಬಲವಂತ ಮಾಡಲಾಗಿತ್ತು. 2020ರಲ್ಲಿ ಗುಜರಾತ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಒಳಉಡುಪು ತೆಗೆದು ತಪಾಸಣೆ ನಡೆಸಲಾಗಿತ್ತು. ಜುಲೈ 2025ರಲ್ಲಿ ರಕ್ತದ ಕಲೆಗಳ ಛಾಯಾಚಿತ್ರ ಪರಿಶೀಲಿಸಿದ್ದ ಪ್ರಾಂಶುಪಾಲರು ನಂತರ ವಿದ್ಯಾರ್ಥಿನಿಯರನ್ನು ದೈಹಿಕ ತಪಾಸಣೆಗೆ ಒಳಗಾಗುವಂತೆ ಸೂಚಿಸಿದ್ದರು.

ಜೈವಿಕ ವ್ಯತ್ಯಾಸಗಳಿಗೆ ತುತ್ತಾದಾಗ ಅಪಮಾನಕರ ತಪಾಸಣೆಗೆ ಒಳಗಾಗದಂತೆ ರಿಯಾಯಿತಿ ಪಡೆಯುವ ಹಕ್ಕು ಮಹಿಳಾ ಕಾರ್ಮಿಕರು, ವಿಶೇಷವಾಗಿ ಅಸಂಘಟಿತ ಕಾರ್ಮಿಕರಿಗೆ ಇದೆ. ಕೆಲ ಸಂಸ್ಥೆಗಳಲ್ಲಿ ಅಪಮಾನಕರ ರೀತಿಯಲ್ಲಿ ಇಂತಹ ಪರಿಶೀಲನೆ ನಡೆಸುತ್ತಿದ್ದು ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಘನತೆಯಿಂದ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅದು ದೂರಿದೆ.

ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದ್ದು ಅಂತಹ ಪರಿಸ್ಥಿತಿ ಮರುಕಳಿಸದಂತಿರಲು ಕೆಲಸದ ಸ್ಥಳದಲ್ಲಿ ಸುರಕ್ಷತೆ ಒದಗಿಸುವುದು ಮುಖ್ಯ ರೋಹ್ಟಕ್‌ ಘಟನೆ ಕುರಿತು ಸಮಗ್ರ ತನಿಖೆ ನಡೆಯಬೇಕು. ದೇಶದೆಲ್ಲೆಡೆ ಋತುಚಕ್ರ ಸಂಬಂಧ ಖಾಸಗಿತನ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರ್ಜಿ ಕೋರಿದೆ.