ವಕೀಲರಿಗೆ ಚೇಂಬರ್ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಗವನ್ನು ಹಂಚಿಕೆ ಮಾಡುವ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಕುರಿತು ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ, ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಜೊತೆ ವಾಗ್ವಾದ ನಡೆಸಿದ ಪ್ರಕರಣದಲ್ಲಿ ಎಸ್‌ಸಿಬಿಎಯು ವಿಕಾಸ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದೆ.
ಮಾರ್ಚ್ 6ರಂದು ನಡೆದ ಕಾರ್ಯಕಾರಿ ಸಭೆಯಲ್ಲಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ನೀರಜ್ ಕಿಶನ್ ಕೌಲ್ ಅವರಿಗೆ ಎಸ್‌ಸಿಬಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮಾರ್ಚ್ 2ರಂದು ಪ್ರಕರಣ ನಡೆದ ಕೆಲವೇ ಗಂಟೆಗಳಲಿ ಸಿಜೆಐ ಚಂದ್ರಚೂಡ್ ಅವರ ಜೊತೆ ವಿಕಾಸ್ ಸಿಂಗ್ ಅವರು ನಡೆದುಕೊಂಡಿದ್ದ ರೀತಿಗೆ ಸಿಬಲ್ ಮತ್ತು ಕೌಲ್ ಅವರು ಕ್ಷಮೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಸಿಬಲ್ ಮತ್ತು ಕೌಲ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಎಸ್‌ಸಿಬಿಎ ಉತ್ತರಿಸಲು ಅವರಿಗೆ ಸೂಚಿಸಿದೆ. ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರ ನಿರ್ಧಾರವನ್ನು ಕಡೆಗಣಿಸಿ ನೋಡುವುದನ್ನು ಖಂಡಿಸಲಾಗುವುದು ಮತ್ತು ಅಂಥ ಸದಸ್ಯರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಸ್‌ಸಿಬಿಎ ಹೇಳಿದೆ.
ಕಳೆದ ಆರು ಬಾರಿ ಪ್ರಕರಣವನ್ನು ಉಲ್ಲೇಖಿಸಲಾಗಿದ್ದು ವಿಚಾರಣೆಗೆ ಪಟ್ಟಿ ಮಾಡಿಲ್ಲ. ಹೀಗಾಗಿ, ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಮಾರ್ಚ್ 2ರಂದು ವಿಕಾಸ್ ಸಿಂಗ್ ಅವರು ಪ್ರಕರಣವನ್ನು ಸಿಜೆಐ ಪೀಠದ ಮುಂದೆ ಉಲ್ಲೇಖಿಸಿದ್ದರು. ಪ್ರಕರಣವನ್ನು ಸಾಮಾನ್ಯ ರೀತಿಯಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಅವರು ಸಿಂಗ್‌ಗೆ ತಿಳಿಸಿದ್ದರು. ಸಿಂಗ್ ಅವರು ಪ್ರಕರಣ ಲಂಬಿಸಲು ಮುಂದಾಗಿ ಹಾಗಾದರೆ ನಾವು ಮುಖ್ಯ ನ್ಯಾಯಮೂರ್ತಿ ನಿವಾಸಕ್ಕೆ ಭೇಟಿ ಮಾಡಬೇಕಾಗುತ್ತದೆ ಎಂದಿದ್ದರು.
ಇದರಿಂದ ಕೆರಳಿದ ಸಿಜೆಐ ತಮ್ಮ ಧ್ವನಿ ಏರಿಸಿ, ತಕ್ಷಣ ಕೋರ್ಟ್ ನ್ಯಾಯಾಲಯದಿಂದ ಹೊರಗೆ ತೆರಳುವಂತೆ ಸಿಂಗ್‌ಗೆ ಸೂಚಿಸಿದ್ದರು. ಪೀಠವು ಬೆದರಿಕೆಯಿಂದ ಬಗ್ಗುವುದಿಲ್ಲ. ಸಿಂಗ್ ಅವರನ್ನು ಸಹ ಮತ್ತಾವುದೇ ದಾವೆದಾರರ ರೀತಿಯಲ್ಲಿಯೇ ನೋಡಲಾಗುವುದು ಎಂದಿದ್ದರು.
“ಪೀಠವು ಬೆದರಿಕೆಯಿಂದ ತಗ್ಗಬೇಕು ಎಂದು ನೀವು ನಿರೀಕ್ಷಿಸಲಾಗದು. ನನ್ನನ್ನು ಈವರೆಗೆ ಬೆದರಿಸಲು ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ವೃತ್ತಿ ಬದುಕಿನ ಇನ್ನೆರಡು ವರ್ಷಗಳಲ್ಲಿಯೂ ಅದಕ್ಕೆ ಆಸ್ಪದ ನೀಡುವುದಿಲ್ಲ… ನ್ಯಾಯಾಲಯದ ಹೊರಗೆ ನಿಮ್ಮ ರಾಜಕೀಯ ಅಜೆಂಡಾ ಜಾರಿಗೆ ನೀವು ಪ್ರಯತ್ನಿಸಬಹುದು” ಎಂದು ಸಿಜೆಐ ಕಟುವಾಗಿ ಹೇಳಿದ್ದರು.
ವಿಕಾಸ್ ಸಿಂಗ್ ಅವರಿಗೆ ಎಸ್‌ಸಿಬಿಎ ಈ ವಿಚಾರವಾಗಿ ಬೆಂಬಲಿಸಿರುವುದಲ್ಲದೆ, ಮಾರ್ಚ್ 16ರಂದು ಸಂಜೆ 4 ಗಂಟೆಗೆ ಸಾಮಾನ್ಯ ಸಭೆ ನಡೆಸಲಾಗುವುದು ಎಂದು ತಿಳಿಸಿದೆ. ಸದಸ್ಯರು ಎಸ್‌ಸಿಎಬಿಎ ಸದಸ್ಯತ್ವ ಗುರುತಿನ ಚೀಟಿ ತೋರ್ಪಡಿಸಿ ಸಭೆಯಲ್ಲಿ ಭಾಗವಹಿಸಬಹುದು. ಕೈ ಎತ್ತುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಎಸ್‌ಸಿಬಿಎ ಹೇಳಿಕೆಯಲ್ಲಿ ತಿಳಿಸಲಾಗಿದೆ.