ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಯ ಸಂಬಂಧ ತ್ವರಿತಗತಿಯ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ವಾಸುದೇವ್ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್ ಹಾಗೂ ಆರನೇ ಆರೋಪಿ ಅಮಿತ್ ಬಡ್ಡಿ ಅಲಿಯಾಸ್ ಅಮಿತ್ ಅಲಿಯಾಸ್ ಗೋವಿಂದ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಕಲಬುರ್ಗಿ ಅವರ ಕೊಲೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಈ ಸಂಬಂಧ ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರವಿದೆ. ಈ ಸಂಬಂಧ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಅವರ ಪ್ರಕರಣದಲ್ಲಿ 138 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.
ಈ ಹಂತದಲ್ಲಿ ಪೀಠವು “ಕಳೆದ ಮಾರ್ಚ್‌ನಲ್ಲಿ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ಹೇಳಿತ್ತು. ಈಗ ಜುಲೈ ಅಂತ್ಯ ಸಮೀಪಿಸುತ್ತಿದ್ದು ಇದುವರೆಗೂ ವಿಶೇಷ ನ್ಯಾಯಾಲಯವೇಕೆ ಸ್ಥಾಪನೆಯಾಗಿಲ್ಲ?” ಎಂದು ಪ್ರಶ್ನಿಸಿತು.
ಆಗ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಅವರು “ಹೈಕೋರ್ಟ್‌ನಲ್ಲಿ ಸಂಬಂಧಿತರ ಜೊತೆ ಅಡ್ವೊಕೇಟ್ ಜನರಲ್ ಮಾತುಕತೆ ನಡೆಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಈ ವಿಚಾರದ ಬಗೆಗಿನ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.
ಆಗ ಪೀಠವು “ವಿಶೇಷ ನ್ಯಾಯಾಲಯ ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅಧಿಸೂಚನೆ ಹೊರಡಿಸಬೇಕು. ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ನಮಗೆ ಗೊತ್ತಿದೆ ಬಿಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ, ಅರುಣ್ ಶ್ಯಾಮ್ ಅವರು “2019ರ ಜುಲೈ 14ರಂದು ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದುವರೆಗೆ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ನಡೆದಿದೆ. ವಿಚಾರಣೆಯ ನೆಪದಲ್ಲಿ ದೀರ್ಘಕಾಲ ಆರೋಪಿಗಳನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಗೌರಿ ಲಂಕೇಶ್ ಪ್ರಕರಣದಲ್ಲಿ ಈಗಾಗಲೇ ಕರ್ನಾಟಕ ಹೈಕೋರ್ಟ್ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ” ಎಂದರು.
ಆಗ ಎಸ್‌ಪಿಪಿ ಅಶೋಕ್ ನಾಯಕ್ ಅವರು ಅರ್ಜಿದಾರರು ಕೊಲೆಯಂಥ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸೂರ್ಯವಂಶಿಯು ಅನಿಲ್ ಜೊತೆ ಸೇರಿ ಎರಡನೇ ಆರೋಪಿಯ ಸೂಚನೆಯಂತೆ ಹುಬ್ಬಳ್ಳಿಯಲ್ಲಿ ಬೈಕ್ ಕಳವು ಮಾಡಿದ್ದಾನೆ. ಅದನ್ನು ಕೊಲೆ ಬಳಕೆ ಮಾಡಲಾಗಿದೆ” ಎಂದರು.
ಆಗ ಪೀಠವು “ಕಳವು ಮಾಡಿದ ಬೈಕ್ ಅನ್ನು ಕೊಲೆಗೆ ಬಳಸಲಾಗಿದೆ ಎಂಬ ಆರೋಪ ಹೊರತುಪಡಿಸಿ ಅರ್ಜಿದಾರರ ಮೇಲೆ ಇರುವ ನಿರ್ದಿಷ್ಟ ಮತ್ತು ಗುರುತರ ಆರೋಪವೇನು” ಎಂದು ಎಸ್‌ಪಿಪಿಗೆ ಪ್ರಶ್ನಿಸಿತು.
ಆಗ ಎಸ್‌ಪಿಪಿ ಅವರು “ಪ್ರಕರಣದ ಮೆರಿಟ್ ಮೇಲೆ ವಾದಿಸಲು ಒಂದು ದಿನ ಕಾಲಾವಕಾಶ ನೀಡಬೇಕು” ಎಂದರು. ಇದಕ್ಕೆ ಪೀಠವು “ಮೆರಿಟ್ ಮೇಲೆ ವಾದಿಸಲು ಹೇಳುತ್ತಿಲ್ಲ. ಮೆರಿಟ್ ಮೇಲಿನ ವಾದ ಆಲಿಸುವುದು ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಅದು ಹೈಕೋರ್ಟ್ ಕೆಲಸವಲ್ಲ. ಆರೋಪಪಟ್ಟಿ ಸಲ್ಲಿಸುವಾಗ ಸಂಗ್ರಹಿಸಿರುವ ದಾಖಲೆಯನ್ನು ಆಧರಿಸಿ, ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ಸಾಬೀತುಪಡಿಸಿ” ಎಂದಿತು. ಅಂತಿಮವಾಗಿ ಎಸ್‌ಪಿಪಿ ಕೋರಿಕೆಯಂತೆ ನಾಳೆ ಮಧ್ಯಾಹ್ನಕ್ಕೆ ನ್ಯಾಯಾಲಯ ವಿಚಾರಣೆ ಮುಂದೂಡಿತು.