M M Kalburgi and Gauri Lankesh 
ಸುದ್ದಿಗಳು

ಹಿರಿಯ ಸಂಶೋಧಕ ಕಲಬುರ್ಗಿ ಹತ್ಯೆ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಇಬ್ಬರು ಆರೋಪಿಗಳು

Siddesh M S

ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಅಲಿಯಾಸ್‌ ವಾಸು ಅಲಿಯಾಸ್‌ ಮೆಕ್ಯಾನಿಕ್‌ ಹಾಗೂ ಆರನೇ ಆರೋಪಿ ಅಮಿತ್‌ ಬಡ್ಡಿ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಗೋವಿಂದ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿದೆ.

ಅರ್ಜಿದಾರರ ವಾದ ಆಲಿಸಿದ ಪೀಠವು ವಿಶೇಷ ತನಿಖಾ ದಳಕ್ಕೆ ನೋಟಿಸ್‌ ಜಾರಿ, ಮಾಡಿ ವಿಚಾರಣೆ ಮುಂದೂಡಿದೆ. ಈ ಇಬ್ಬರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದ ವಿಚಾರಣಾಧೀನ ನ್ಯಾಯಾಲಯವು 2024ರ ಏಪ್ರಿಲ್‌ 16ರಂದು ತಿರಸ್ಕರಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಆಗಸ್ಟ್‌ 14ರಂದು ಎಸ್‌ಐಟಿಯು ಆರೋಪ ಪಟ್ಟಿ ಸಲ್ಲಿಸಿದೆ. 2021ರ ಸೆಪ್ಟೆಂಬರ್‌ 7ರಂದು ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್‌ 28ರಂದು ಮೊದಲ ವಿಚಾರಣೆ ನಡೆದಿದೆ. ಅಧಿಕೃತವಾಗಿ 2022ರ ಫೆಬ್ರವರಿ 19ರಂದು ವಿಚಾರಣೆ ಆರಂಭವಾಗಿದೆ. ಪ್ರಾಸಿಕ್ಯೂಷನ್‌ 138 ಸಾಕ್ಷಿಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು, ಇದುವರೆಗೆ 9 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಇನ್ನೂ 129 ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ವಾಸುದೇವ್‌ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬಡ್ಡಿ ವಿರುದ್ದ ಇದುವರೆಗೂ ಯಾವುದೇ ಸಾಕ್ಷಿಗೆ ಸಮನ್ಸ್‌ ಆಗಿಲ್ಲ. ಸೂರ್ಯವಂಶಿಯನ್ನು 2019ರ ಫೆಬ್ರವರಿ 2ರಂದು ಮತ್ತು ಅಮಿತ್‌ನನ್ನು 2018ರ ಸೆಪ್ಟೆಂಬರ್‌ 15ರಂದು ಬಂಧಿಸಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೊದಲನೇ ಆರೋಪಿ ಅಮೋಲ್‌ ಕಾಳೆಯ ಸೂಚನೆಯಂತೆ 2015ರ ಮೇ 3ರಂದು ಸೂರ್ಯವಂಶಿ ಮತ್ತು ಅನಿಲ್‌ ಬಡ್ಡಿ ಬೈಕ್‌ ಕದ್ದಿದ್ದು, ಅದನ್ನು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ನೀಡಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಪಿತೂರಿಯ ಭಾಗವಾಗಿದ್ದಾರೆ ಎಂಬುದು ಅವರ ಮೇಲಿನ ಆರೋಪವಾಗಿದೆ. ಬೈಕ್‌ ಕದ್ದ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸೂರ್ಯವಂಶಿ ಮತ್ತು ಅಮಿತ್‌ ಬಡ್ಡಿ ಖುಲಾಸೆಯಾಗಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2015ರ ಆಗಸ್ಟ್‌ 30ರ ಬೆಳಿಗ್ಗೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಬಂದೂಕಿನಿಂದ ಧಾರವಾಡದ ತಮ್ಮ ನಿವಾಸದಲ್ಲಿದ್ದ ಎಂ ಎಂ ಕಲಬುರ್ಗಿ ಅವರ ಹಣೆಯ ಭಾಗಕ್ಕೆ ಶೂಟ್‌ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಲಬುರ್ಗಿ ಅವರು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅಸುನೀಗಿದ್ದರು.

ಈ ಸಂಬಂಧ ಆರೋಪಿಗಳ ವಿರುದ್ಧ ಧಾರವಾಡದ ವಿದ್ಯಾಗಿರಿಯ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 25(1)(ಎ), 25(1)ಬಿ, 27(1) ಅಡಿ ಪ್ರಕರಣ ದಾಖಲಾಗಿದ್ದು, ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಈ ಮಧ್ಯೆ, ಪ್ರಾಸಿಕ್ಯೂಷನ್‌ ವಾಸುದೇವ್‌ ಸೂರ್ಯವಂಶಿಯು ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅಮಿತ್‌ ಬಡ್ಡಿ ಆರೋಪಿಯಾಗಿದ್ದಾನೆ ಎಂದು ವಿಚಾರಣಾಧೀನ ನ್ಯಾಯಾಲಯದಲ್ಲಿ ಈ ಇಬ್ಬರ ಜಾಮೀನಿಗೆ ನ್ಯಾಯಾಲಯದಲ್ಲಿ ವಿರೋಧಿಸಿತ್ತು.