ತಮಗೆ ₹ 25 ಲಕ್ಷ ದಂಡ ವಿಧಿಸಿ ತಮ್ಮ ವಿರುದ್ಧ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇ ಡಿ) ಮತ್ತು ಸಿಬಿಐಗೆ ಅನುಮತಿ ನೀಡಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕರೋಲ್ ಅವರಿದ್ದ ರಜಾಕಾಲೀನ ಪೀಠದೆದುರು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣ ಪ್ರಸ್ತಾಪಿಸಿದರು. ಶುಕ್ರವಾರ, ಮೇ 26ರಂದು ಅರ್ಜಿಯ ವಿಚಾರಣೆಗೆ ಪೀಠ ಸಮ್ಮತಿ ಸೂಚಿಸಿತು.
ಅಭಿಷೇಕ್ ಅವರ ವಿರುದ್ಧ ಸಿಬಿಐ ಮತ್ತು ಇ ಡಿ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಏಪ್ರಿಲ್ 13ರಂದು ಆದೇಶಿಸಿದ್ದರು.
ಹಗರಣದ ಆರೋಪಿಯಾದ ಕುಂತಲ್ ಘೋಷ್ ತನ್ನ (ಜಾರಿ ನಿರ್ದೇಶನಾಲಯ) ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರಿಂದ ತನ್ನ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸರು ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕೆಂದು ಕೋರಿ ಇ ಡಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿತ್ತು. ಅಧಿಕಾರಿಗಳು ತನಗೆ ಚಿತ್ರಹಿಂಸೆ ನೀಡಿ ಅಭಿಷೇಕ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕುಂತಲ್ ಆರೋಪಿಸಿದ್ದರು.
ನ್ಯಾ. ಗಂಗೋಪಾಧ್ಯಾಯ ಅವರು ನೀಡಿದ್ದ ಆದೇಶ ಹಿಂಪಡೆಯಲು ಕೋರಿ ಅಭಿಷೇಕ್ ಮತ್ತು ಕುಂತಲ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಅಮೃತಾ ಸಿನ್ಹಾ ಮೇ 18 ರಂದು ವಜಾಗೊಳಿಸಿ ಇಬ್ಬರೂ ತಲಾ ₹ 25 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದ್ದರು.
ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ನ್ಯಾ. ಅಮೃತಾ ಅವರು ಇ ಡಿ ಮತ್ತು ಸಿಬಿಐಯನ್ನೂ ತರಾಟಗೆಗೆ ತೆಗೆದುಕೊಂಡಿದ್ದರು.
"ಮುಚ್ಚಿದ ಲಕೋಟೆಗಳಲ್ಲಿ ಏನಿದೆಯೋ ಅದು ಪೂರ್ವೇತಿಹಾಸ ಕಾಲಕ್ಕೆ ಸೇರಿದ್ದು. ತನಿಖಾಧಿಕಾರಿಗಳು 2022ರಲ್ಲಿ ಏನಾಯಿತು ಎಂದು ಹೇಳುತ್ತಿದ್ದಾರೆ. ಆದರೆ ನಾವು 2023ರಲ್ಲಿ ಇದ್ದೇವೆ. ಈ ಲಕೋಟೆಗಳಲ್ಲಿ ಯಾವುದೇ ಹೊಸ ಮತ್ತು ಇತ್ತೀಚಿನ ಬೆಳವಣಿಗೆಯನ್ನು ಉಲ್ಲೇಖಿಸಿಲ್ಲ. ಸಾಕ್ಷಿಗಳು ಕಣ್ಮರೆಯಾಗಲಿ ಎಂದು ತನಿಖಾ ಸಂಸ್ಥೆಗಳು ಕಾಯುತ್ತಿವೆಯೇ?” ಎಂದು ಗುಡುಗಿದ್ದರು.