ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್ 
ಸುದ್ದಿಗಳು

ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ: 24 ಸಾವಿರ ನೇಮಕಾತಿಗಳನ್ನು ರದ್ದುಪಡಿಸಿದ ಕಲ್ಕತ್ತಾ ಹೈಕೋರ್ಟ್‌

Bar & Bench

ಪಶ್ಚಿಮ ಬಂಗಾಳ ಸರ್ಕಾರದ ಅನುದಾನಿತ ಶಾಲೆಯ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವು (ಡಬ್ಲ್ಯುಬಿಎಸ್‌ಎಸ್‌ಸಿ) 2016ರ ನೇಮಕಾತಿ ಪ್ರಕ್ರಿಯೆ ಮೂಲಕ ನೇಮಿಸಿದ್ದ 24,000 ಸಾವಿರ ಹುದ್ದೆಗಳನ್ನು ಸೋಮವಾರ ಕಲ್ಕತ್ತಾ ಹೈಕೋರ್ಟ್‌ ರದ್ದುಪಡಿಸಿ ಮಹತ್ವದ ಆದೇಶ ಮಾಡಿದೆ.

ನೇಮಕಾತಿಯನ್ನು ಅಸಿಂಧುಗೊಳಿಸಿರುವ ನ್ಯಾಯಮೂರ್ತಿಗಳಾದ ದೇಬಂಗ್ಸು ಬಾಸಕ್‌ ಮತ್ತು ಮೊಹಮ್ಮದ್‌ ಶಬ್ಬಾರ್‌ ರಶೀದಿ ಅವರ ನೇತೃತ್ವದ ವಿಭಾಗೀಯ ಪೀಠವು ಅಕ್ರಮವಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಸ್ವೀಕರಿಸಿರುವ ವೇತನ ಮರಳಿಸುವಂತೆ ಆದೇಶಿಸಿದೆ.

“ನೇಮಕಗೊಂಡಿರುವ ಅಭ್ಯರ್ಥಿಗಳು ಒಂದು ತಿಂಗಳ ಒಳಗೆ ತಮ್ಮ ವೇತನವನ್ನು ಮರಳಿಸಬೇಕು. ಜಿಲ್ಲಾ ದಂಡಾಧಿಕಾರಿ ಅದನ್ನು ಸಂಗ್ರಹಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

2016ರಲ್ಲಿ 24,000 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ 23 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಓಎಂಆರ್‌ ಶೀಟುಗಳನ್ನು ತಪ್ಪಾಗಿ ಮೌಲ್ಯಮಾಪನ ಮಾಡುವ ಮೂಲಕ ಹಲವು ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಆರೋಪಿಸಲಾಗಿತ್ತು.

23 ಲಕ್ಷ ಅಭ್ಯರ್ಥಿಗಳ ಓಎಂಆರ್‌ ಶೀಟಿನಲ್ಲಿ ಯಾವುದನ್ನು ಸರಿಯಾಗಿ ಮೌಲ್ಯಮಾಪನ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ. ಹೀಗಾಗಿ, ನೇಮಕಾತಿ ಪ್ರವೇಶ ಪರೀಕ್ಷೆಯ ಎಲ್ಲಾ ಓಎಂಆರ್‌ ಶೀಟುಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಡಬ್ಲ್ಯುಬಿಎಸ್‌ಎಸ್‌ಸಿಗೆ ಆದೇಶಿಸಿದ್ದು, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಡಬ್ಲ್ಯುಬಿಎಸ್‌ಎಸ್‌ಸಿಗೆ ನ್ಯಾಯಾಲಯ ನಿರ್ದೇಶಿಸಿದೆ. ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಆದೇಶಿಸಿದೆ.

2016ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಲು ಹಣ ಪಡೆದ ಹಗರಣ ಇದಾಗಿದೆ. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಟಿಎಂಸಿ ಶಾಸಕರಾದ ಮಾಣಿಕ್‌ ಭಟ್ಟಾಚಾರ್ಯ, ಜೀಬನ್‌ ಕೃಷ್ಣ ಸಹಾ ಹಾಗೂ ಟಿಎಂಸಿಯ ಉಚ್ಛಾಟಿತ ನಾಯಕರಾದ ಸಂತನು ಕುಂಡು ಮತ್ತು ಕುಂತಲ್‌ ಘೋಷ್‌ ಅವರು ಜೈಲಿನಲ್ಲಿದ್ದಾರೆ.