Abhishek Banerjee, CBI & ED
Abhishek Banerjee, CBI & ED 
ಸುದ್ದಿಗಳು

ನೇಮಕಾತಿ ಹಗರಣ: ಅಭಿಷೇಕ್ ಆಸ್ತಿ ಕೇವಲ 3 ವಿಮಾ ಪಾಲಿಸಿ ಎನ್ನುವ ಇ ಡಿ ಮಾಹಿತಿ ಕಂಡು ಬೆಚ್ಚಿದ ಕಲ್ಕತ್ತಾ ಹೈಕೋರ್ಟ್‌

Bar & Bench

ಕೇವಲ 3 ವಿಮಾ ಪಾಲಿಸಿಗಳನ್ನು ಬಿಟ್ಟರೆ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಬೇರೆ ಆಸ್ತಿ ಇಲ್ಲ ಎನ್ನುವ ಜಾರಿ ನಿರ್ದೇಶನಾಲಯದ (ಇ ಡಿ) ಮಾಹಿತಿಯನ್ನು ಕಂಡು ಕಲ್ಕತ್ತಾ ಹೈಕೋರ್ಟ್‌ ಸೋಮವಾರ ಆಘಾತ ವ್ಯಕ್ತಪಡಿಸಿದೆ.  

ಅಭಿಷೇಕ್‌ ಬ್ಯಾನರ್ಜಿ ಭಾಗಿಯಾಗಿದ್ದಾರೆ ಎನ್ನಲಾದ ಶಾಲಾ ನೇಮಕಾತಿ ಹಗರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಿರುವ ಬಗ್ಗೆ ಜಾರಿ ನಿರ್ದೇಶನಾಲಯವನ್ನು ನ್ಯಾ. ಅಮೃತಾ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ತರಾಟೆಗೆ ತೆಗೆದುಕೊಂಡಿತು.

ಅಭಿಷೇಕ್‌ ಒಡೆತನದಲ್ಲಿದೆ ಎನ್ನಲಾದ ಕಂಪೆನಿಯ ವಿವಿಧ ನಿರ್ದೇಶಕರ ಆಸ್ತಿ ವಿವರ ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ಆದೇಶಿಸಿತ್ತು.

ಅಭಿಷೇಕ್‌ ಮತ್ತಿತರ ನಿರ್ದೇಶಕರು ಪ್ರತಿನಿಧಿಸುವ ವಕೀಲರು ಒದಗಿಸಿದ ಮಾಹಿತಿಯನ್ನು ಆಧರಿಸಿ ಇ ಡಿ ಆಸ್ತಿ ವಿವರ ಸಲ್ಲಿಸಿತ್ತು. ಹೀಗಾಗಿ ನ್ಯಾಯಮೂರ್ತಿಗಳು “ಅವರು (ಅಭಿಷೇಕ್‌) ಕೇವಲ ಮೂರು ಪಾಲಿಸಿ ಹೊಂದಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಸಂಸದರಾಗಿರುವ ಅವರ ಬಳಿ ಯಾವುದೇ ಬ್ಯಾಂಕ್‌ ಖಾತೆ ಇಲ್ಲವೇ? ಮೂರು ವಿಮಾ ಪಾಲಿಸಿ ಅಷ್ಟೇ ಇದೆ ಎನ್ನುವ ಮಾಹಿತಿಯನ್ನು ನೋಡಿ ಈ ನ್ಯಾಯಾಲಯ ಬೆಚ್ಚಿ ಬಿದ್ದಿದೆ. ಅವರು ಸಂಸದರಾಗಿದ್ದು ಅವರ ವೇತನ ಜಮೆಯಾಗಲಾದರೂ ಬ್ಯಾಂಕ್‌ ಖಾತೆ ಹೊಂದಿರಬೇಕು. ಹೀಗಾಗಿ ನೀವು (ಇ ಡಿ) ಮಾಹಿತಿಗಳನ್ನು ಮುಚ್ಚಿಡುತ್ತಿದ್ದೀರೋ ಹೇಗೆ, ನನಗಂತೂ  ಅರ್ಥವಾಗುತ್ತಿಲ್ಲ” ಎಂದು ಅಭಿಪ್ರಾಯಪಟ್ಟರು.

ಲೀಪ್ಸ್‌ ಅಂಡ್‌ ಬೌಂಡ್ಸ್‌ ಕಂಪೆನಿಯ ವಿರುದ್ಧದ ತನಿಖೆ ವೇಳೆ ಇಡಿಯ ಹಲವು ಲೋಪಗಳನ್ನು ಪೀಠ ಎತ್ತಿ ತೋರಿಸಿದೆ.  ಕಂಪೆನಿಯ ಆಸ್ತಿ ವಿವರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ "ಒಂದು ಸೈಕಲ್ ಕೂಡ ಇದೆಯೇ? ಟ್ರೈಸಿಕಲ್ ಇದೆಯೇ? ಅದು ಮೋಟಾರ್ ಸೈಕಲ್ ಆಗಿದ್ದರೆ ವಿವರಗಳು ಇರುತ್ತಿದ್ದವೇನೋ... ಅಥವಾ ಇದು ದುಬಾರಿ ಹಾರ್ಲೆ ಡೇವಿಡ್‌ಸನ್‌ ಬೈಕಾಗಿದೆಯೇ? ನೀವು ಸರಿಯಾಗಿ ಪರಿಶೀಲಿಸಿದ್ದೀರಾ? ಇಲ್ಲವಾ?" ಎಂದು ಹರಿಹಾಯಿತು.

ಇದಲ್ಲದೆ, ಜೂನ್ 2022 ರಿಂದ ಪ್ರಕರಣದ ತನಿಖೆ ನಡೆಸುತ್ತಿದ್ದರೂ, ಇಡಿ ಹೆಚ್ಚಿನ ಪ್ರಗತಿ ಸಾಧಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

"ತನಿಖೆಗೆ ಆದೇಶ ನೀಡಿದ ದಿನದಿಂದ ಈವರೆಗೆ 18 ತಿಂಗಳುಗಳು ಕಳೆದಿವೆ. ಆದರೆ ಯಾವುದೇ ಫಲಿತಾಂಶ ಕಂಡುಬಂದಿಲ್ಲ. ತನಿಖೆಗೆ ಒಳಪಟ್ಟಿರುವ ನೇಮಕಗೊಂಡ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅರ್ಹರಲ್ಲದ ಕಾರಣ ತನಿಖಾ ಸಂಸ್ಥೆಗಳು ಆತ್ಮಾವಲೋಕನಕ್ಕೆ ಮುಂದಾಗಬೇಕು ಮತ್ತು ಶ್ರದ್ಧೆ ವಹಿಸಿ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಲು ಮಾರ್ಗಗಳನ್ನು ಕಂಡುಹಿಡಿಯಬೇಕು ಎಂದು ನ್ಯಾಯಾಲಯ ನುಡಿದಿದೆ.

ಶಾಲಾ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿದ್ದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಟಿವಿ ಸಂದರ್ಶನವೊಂದರಲ್ಲಿ ಅಭಿಷೇಕ್‌ ಅವರ ವಿರುದ್ಧ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ಬದಲು ಬೇರೆ ಪೀಠ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವಿಚಾರಣೆ ನಡೆಸುತ್ತಿರುವ ನ್ಯಾ. ಅಮೃತಾ ಸಿನ್ಹಾ ಅವರಿದ್ದ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು.