Supreme Court of India  A1
ಸುದ್ದಿಗಳು

ಶಾಲಾ ಉದ್ಯೋಗ ಹಗರಣ: 32,000 ಶಿಕ್ಷಕರ ಹುದ್ದೆಗಳಿಗೆ ಹೊಸ ನೇಮಕಾತಿ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಲಂಚಕ್ಕಾಗಿ ಶಿಕ್ಷಕರ ನೇಮಕಾತಿ ಹಗರಣ ಕುರಿತಂತೆ ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

Bar & Bench

ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಗೆ ಆಗಸ್ಟ್ 2023ರ ಅಂತ್ಯದೊಳಗೆ 32,000 ಶಿಕ್ಷಕರ ಹುದ್ದೆಗಳಿಗೆ ಹೊಸ ಆಯ್ಕೆ ಪ್ರಕ್ರಿಯೆ ನಡೆಸುವಂತೆ ನಿರ್ದೇಶನ ನೀಡಿ ಕಲ್ಕತ್ತಾ ಹೈಕೋರ್ಟ್‌ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

“ಪ್ರಕರಣದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಶಿಕ್ಷಕರು ಅಥವಾ ಅವರ ಪ್ರತಿನಿಧಿಗಳನ್ನು ಕೇಳದೆ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣದ ಆರಂಭಿಕ ಆದೇಶ ನೀಡಿರುವುದು ವಾದಗಳಿಂದ ಮನವರಿಕೆಯಾಗಿದೆ” ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಕೆ ವಿ ವಿಶ್ವನಾಥನ್ ಅವರು ತಿಳಿಸಿದ್ದಾರೆ.

ಹಾಗಾಗಿ ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸುವ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದ್ದ  ವಿಭಾಗೀಯ ಪೀಠದ ಆದೇಶ ಸಮರ್ಥನೀಯವಲ್ಲ ಎಂದು ತಿಳಿಸಿ ಅದನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

ಲಂಚಕ್ಕಾಗಿ ಶಿಕ್ಷಕರ ನೇಮಕಾತಿ ಹಗರಣ ಕುರಿತಂತೆ ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಕೂಡ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ 32,000 ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿದ್ದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ಮೇ 19ರ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸುಬ್ರತಾ ತಾಲೂಕ್ದಾರ್ ಮತ್ತು ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಆದೇಶಕ್ಕೆ ತಡೆ ನೀಡಿತ್ತಾದರೂ ಏಕಸದಸ್ಯ ಪೀಠದ ಆದೇಶದಂತೆ ಮಂಡಳಿ ಆಗಸ್ಟ್ 2023ಕ್ಕೂ ಮೊದಲು ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿತ್ತು.