Abhishek Banerjee and Supreme Court 
ಸುದ್ದಿಗಳು

ಶಾಲಾ ನೇಮಕಾತಿ ಹಗರಣ: ಅಭಿಷೇಕ್‌ ವಿರುದ್ಧದ ತನಿಖೆ ತಡೆಗೆ ಸುಪ್ರೀಂ ನಕಾರ; ₹ 25 ಲಕ್ಷ ದಂಡ ಪಾವತಿ ಆದೇಶ ರದ್ದು

ಪ್ರಕರಣದ ತನಿಖೆ ತಡೆಯುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ಪ್ರಕರಣವನ್ನು ಹೈಕೋರ್ಟ್ ಸೂಕ್ತ ರೀತಿಯಲ್ಲಿಯೇ ತೀರ್ಮಾನಿಸಿದೆ ಎಂಬುದಾಗಿ ಸಿಜೆಐ ನೇತೃತ್ವದ ಪೀಠ ತಿಳಿಸಿದೆ.

Bar & Bench

ಪಶ್ಚಿಮ ಬಂಗಾಳದ ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ (ಎಐಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ನಡೆಸುತ್ತಿರುವ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇ ಡಿ ತಮ್ಮ ವಿರುದ್ಧ ತನಿಖೆ ನಡೆಸದಂತೆ ಕೋರಿ ಅಭಿಷೇಕ್‌ ಸಲ್ಲಿಸಿದ್ದ ಮನವಿಯನ್ನು ಕಲ್ಕತ್ತಾ ಹೈಕೋರ್ಟ್‌ ವಜಾಗೊಳಿಸಿತ್ತು. ಆ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ಆದರೆ ಅಭಿಷೇಕ್‌ ಅವರು ₹ 25 ಲಕ್ಷ ದಂಡ ಪಾವತಿಸಬೇಕು ಎಂದು ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ. ಇಷ್ಟಾದರೂ ತನ್ನ ಈ ನಿರ್ದೇಶನವನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನ ಅರ್ಹತೆಯ ವಿರುದ್ಧದ ಅಭಿವ್ಯಕ್ತಿ ಎಂದು ವ್ಯಾಖ್ಯಾನಿಸಬಾರದು ಎಂಬುದಾಗಿ ಅದು ಸ್ಪಷ್ಟಪಡಿಸಿದೆ.

ಪ್ರಕರಣದ ತನಿಖೆ ತಡೆಯುವಂತೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಸೂಕ್ತ ರೀತಿಯಲ್ಲಿಯೇ ತೀರ್ಮಾನಿಸಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ತಿಳಿಸಿದೆ. ಹಾಗಾಗಿ, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಪೀಠ, ಅಂತಹ ಹಸ್ತಕ್ಷೇಪ  ತನಿಖೆಯ ಓಘವನ್ನು ಕುಂಠಿತಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಸಿಆರ್‌ಪಿಸಿ ಸೆಕ್ಷನ್ 482 (ಹೈಕೋರ್ಟ್‌ನ ಅಂತರ್ಗತ ಅಧಿಕಾರ ರಕ್ಷಣೆ) ಸೇರಿದಂತೆ ಇತರ ಪರಿಹಾರಗಳ ಕೋರಿಕೆ ಮುಂದುವರೆಸಲು ನ್ಯಾಯಾಲಯ ಅಭಿಷೇಕ್‌ ಅವರಿಗೆ ಮುಕ್ತ ಅವಕಾಶ ಕಲ್ಪಿಸಿದೆ.   

ಅಭಿಷೇಕ್‌ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. ತನಿಖಾ ಸಂಸ್ಥೆಗಳನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಪ್ರತಿನಿಧಿಸಿದ್ದರು.